www.dgnsgreenworld.blogspot.com

Friday, July 26, 2019

ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯ ಇತಿಹಾಸ



SAVE NATURE, HEALTHY, WEALTHY & WISE. dgnsgreenworld FAMILY.

ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, 'ದೇವಿ ಮಹಾತ್ಮೆ' ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ 'ದೇವಿ ಮಹಾತ್ಮೆ' ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟ ವೆಂಬ ಹೆಸರು ಬಂದಿದೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಅದರ ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವು ಎಂಟು ಬೆಟ್ಟಗಳ ಪೈಕಿ ಒಂದಾಗಿದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ ಕರೆಯಲಾಗುತ್ತಿತ್ತು.
ಹಿಂದೆ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನವೆಂಬ ದೊಡ್ಡ ದೇವಸ್ಥಾನವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿದುಬರುತ್ತದೆ. 1799 ರಲ್ಲಿ ಅಧಿಕಾರಕ್ಕೆ ಬಂದ ಮೈಸೂರು ಅರಸರು ಈ ದೇವಿ ಆರಾಧಕರಾಗಿದ್ದು, ಶ್ರಧ್ದಾ ಭಕ್ತಿಯಿಂದ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ. ಹಾಗೂ ಹೆಚ್ಚಿನ ಮಹತ್ವ ತಂದಿದ್ದಾರೆ.
ಚಾಮುಂಡಿಬೆಟ್ಟ ಚಾರಿತ್ರಿಕ ಹಿನ್ನಲೆಯಲ್ಲಿ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆಯಿದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರ ಹಿನ್ನಲೆಯನ್ನು ಗುರುತಿಸಲಾಗಿದೆ. ಕ್ರಿ.ಶ. 1573 ರಲ್ಲಿ ಚಾಮರಾಜ ಒಡೆಯರು ದೇವಿಯನ್ನು ಪೂಜಿಸಲು ಹೋಗುತ್ತಿದ್ದಾಗ ಅವರಿಗೆ ಸಿಡಿಲು ಬಡಿದು ಅವರ ತಲೆಯ ಕೂದಲೆಲ್ಲಾ ಉದುರಿ ಹೋದವೆಂದು ಇತಿಹಾಸ ಹೇಳುತ್ತದೆ.
ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ `ಗೋಪುರ` ಮತ್ತು ಗರ್ಭಗುಡಿಯ ಮೇಲೆ 'ವಿಮಾನ' ಶಿಖರಗಳಿವೆ. ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶಿಖರದ ಮೇಲೆ ಏಳು ಚಿನ್ನದ ಲೇಪಿತ ಕಲಶಗಳಿವೆ.
ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ. 1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು. 'ಸಿಂಹವಾಹನ' ಒಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು. 'ಸಿಂಹ ವಾಹನ' ವನ್ನು ರಥೋತ್ಸವ ಸಂಧರ್ಭದಲ್ಲಿ ಬಳಸಲಾಗುತ್ತಿದ್ದು ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ. ದ್ವಾರದ ಮೇಲ್ಭಾಗದಲ್ಲಿ ಸಣ್ಣದೊಂದು ಗಣಪತಿಯ ವಿಗ್ರಹವನ್ನು ನೋಡಬಹುದು. ದ್ವಾರದ ಬೃಹತ್ ಮರದ ಬಾಗಿಲನ್ನು ಬೆಳ್ಳಿಯ ತಗಡಿನಿಂದ ಹೊದಿಸಲಾಗಿದ್ದು, ಬೆಳ್ಳಿಯ ಬಾಗಿಲಿನ ಮೇಲೆ ದೇವಿಯ ಹಲವು ಸ್ವರೂಪಗಳನ್ನು ತೋರಲಾಗಿದೆ. ಮಹಾದ್ವಾರದ ಕೆಳ ಪಾರ್ಶ್ವದಲ್ಲಿ ಇಂದ್ರಾದಿ ಅಷ್ಠದಿಕ್ಪಾಲಕರ ವಿಗ್ರಹಗಳಿವೆ.
ಮಹಾದ್ವಾರದಿಂದ ಒಳಗೆ ಹೋದರೆ ಬಲಭಾಗದಲ್ಲಿ ದಕ್ಷಿಣಾಭಿಮುಖವಾಗಿ ಗಣಪತಿಯ ಸಣ್ಣ ವಿಗ್ರಹವು ಸ್ಥಾಪಿಸಲ್ಪಟ್ಟಿದೆ. ವಿಘ್ನರಾಜನಿಗೆ ನಮಿಸಿ ಕೆಲವು ಕಲ್ಲಿನ ಮೆಟ್ಟಿಲುಗಳನ್ನು ಹತ್ತಿಹೋದರೆ ದೇವಸ್ಥಾನದ ಬಲಿಪೀಠ ಮತ್ತು ಧ್ವಜ ಸ್ಥಂಭ ಕಂಡುಬರುತ್ತದೆ. ಬಲಿಪೀಠದ ಮೇಲೆ ದೇವಿಯ ಪಾದಗಳನ್ನು ರೂಪಿಸಲಾಗಿದೆ. ಇವೆರಡರ ಮುಂಭಾಗದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ಸಣ್ಣದೊಂದು ನಂದಿ ವಿಗ್ರಹವಿದೆ. ಮಾತೆ ಚಾಮುಂಡಿಯನ್ನು ಅದು ವೀಕ್ಷಿಸುತ್ತಾ ಕುಳಿತಿದೆ. ಧ್ವಜ ಸ್ಥಂಭಕ್ಕೆ ಈಶಾನ್ಯದಲ್ಲಿ ಗೋಡೆಯ ಮೇಲೆ ಆಂಜನೇಯನ ವಿಗ್ರಹವಿದ್ದು ಅದಕ್ಕೂ ನಿತ್ಯ ಪೂಜೆ ಜರುಗುತ್ತದೆ. ಇಲ್ಲಿನ ಪ್ರವೇಶ ದ್ವಾರದಲ್ಲಿ ನಂದಿನಿ ಮತ್ತು ಕಮಲಿನಿ ಎಂಬ ದ್ವಾರಪಾಲಿಕೆಯರ ವಿಗ್ರಹಗಳು ದ್ವಾರದ ಎಡ ಮತ್ತು ಬಲ ಭಾಗದಲ್ಲಿವೆ.
ಗರ್ಭಗುಡಿಗೆ ಮುಂಚೆ ಇರುವ ಅ0ತರಾಳದ ಎಡಭಾಗದಲ್ಲಿ ಮುದ್ದಾದ ಗಣಪತಿ ವಿಗ್ರಹ ಮತ್ತು ಬಲಭಾಗದಲ್ಲಿ ಭೈರವ ದೇವರ ವಿಗ್ರಹಗಳಿವೆ. ಭೈರವ ದೇವರ ಎಡಭಾಗದಲ್ಲಿ ಚಾಮುಂಡಿಯ ಪಂಚಲೋಹದ ಸುಂದರ ಉತ್ಸವ ಮೂರ್ತಿಯಿದೆ. ಗಣಪತಿಯ ಬಲಭಾಗದಲ್ಲಿ ಭಕ್ತನ ದಿರಿಸು ತೊಟ್ಟಿರುವ ಮುಮ್ಮಡಿ ಕೃಷ್ಣರಾಜ ಒಡೆಯರ ಆರು ಅಡಿ ಎತ್ತರದ ಸುಂದರ ಭಕ್ತ ವಿಗ್ರಹ ಕಾಣಬರುತ್ತದೆ. ಮಹಾರಾಜರು ತಮ್ಮ ಮೂವರು ಪತ್ನಿಯರೊಂದಿಗೆ ದೇವಿಗೆ ಕೈಮುಗಿದು ನಿಂತಿದ್ದಾರೆ. ಮಹಾರಾಜರ ಎಡಭಾಗಗಳಲ್ಲಿ ನಿಂತಿರುವವರೆಂದರೆ ರಮಾವಿಲಾಸ, ಲಕ್ಷ್ಮಿವಿಲಾಸ ಮತ್ತು ಕೃಷ್ಣವಿಲಾಸ ಮಹಾರಾಣಿಯರು. ಇವರುಗಳ ಶಿಲಾ ವಿಗ್ರಹಗಳ ಪಾದದ ಬಳಿಯ ಪೀಠದ ಮೇಲೆ ಇವರುಗಳ ಹೆಸರುಗಳನ್ನು ಕೆತ್ತಲಾಗಿದೆ.
ದೇವಾಲಯದ ಅರ್ಚಕರು ತಾಯಿ ಸ್ವರೂಪದ ಶಿಲಾ ಪ್ರತಿಮೆಯನ್ನು ಪ್ರತಿ ದಿನ ಅಲಂಕರಿಸಿ ಪೂಜೆ ಮಾಡುತ್ತಾರೆ. ಯದುಕುಲದ ದೇವತೆಯಾಗಿ ಬೆಳೆದು ಬಂದಿರುವ ಶ್ರೀ ಚಾಮುಂಡೇಶ್ವರಿಗೆ ಮೈಸೂರಿನ ಮಹಾರಾಜರುಗಳು ಹಲವಾರು ಬೆಲೆಬಾಳುವ ಹಾಗೂ ಅಪರೂಪವಾದ ಕಾಣಿಕೆಗಳನ್ನು ಶ್ರಧ್ಧಾಭಕ್ತಿಯಿಂದ ಒಪ್ಪಿಸಿದ್ದಾರೆ. ಈ ಶಕ್ತಿ ದೇವತೆಗೆ ಮಾನವ ಮತ್ತು ಪ್ರಾಣಿ ಬಲಿಯನ್ನು ಹಿಂದೆ ಕೊಡಲಾಗುತ್ತಿತ್ತು. ಆದರೆ 18ನೇ ಶತಮಾನದಲ್ಲಿ ಅದಕ್ಕೆ ಕಡಿವಾಣ ಬಿತ್ತು. ಈಗೇನಿದ್ದರೂ ಫಲಪುಷ್ಪಗಳ ಅರ್ಚನೆ, ಹಣ್ಣು ಹೂವು ಸಮರ್ಪಣೆ ಮಾತ್ರ ಮಾಡಲಾಗುತ್ತದೆ.
ಗರ್ಭಗುಡಿಯ ಮೇಲ್ಭಾಗದಲ್ಲಿ ಇನ್ನೊಂದು ಸಣ್ಣ ಗೋಪುರ ಕಂಡು ಬರುತ್ತದೆ. ದೇವಾಲಯದ ಹೊರಗಿನಿಂದ 'ವಿಮಾನವನ್ನು' ಕಾಣಬಹುದು. ಒಳ ಪಾರ್ಶ್ವದಲ್ಲಿರುವ ಪ್ರಾಕಾರದಲ್ಲಿ ಹಲವು ಸಣ್ಣ ಮೂರ್ತಿಗಳಿದ್ದು ಅಲ್ಲಿಯೂ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರಾಕಾರದಲ್ಲಿ ಪ್ರದಕ್ಷಿಣೆ ಮುಗಿಸಿ ದೇವಸ್ಥಾನದಿಂದ ಹೊರಹೋಗುವಾಗ ಶ್ರೀ ಆಂಜನೇಯಸ್ವಾಮಿ ದೇವರ ದರ್ಶನವನ್ನು ಮಾಡಬಹುದಾಗಿದೆ.

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World