ವಸುದೈವಕುಟುಂಬಕಂ!
ಓರ್ವ ತಂದೆಯು ಅಂಗಡಿಯಿಂದ ವಿಶ್ವದ ನಕ್ಷೆಯನ್ನು ತಂದಿದ್ದನು. ಅವನ ಸಣ್ಣ ಮಗನು ತಿಳಿಯದೆ ಆ ನಕ್ಷೆಯನ್ನು ಚೂರುಚೂರಾಗಿ ಹರಿದು ಹಾಕಿಬಿಟ್ಟನು. ತಂದೆಗೆ ವಿಪರೀತ ಕೋಪ ಬಂದು ಮಗನ ಮೇಲೆ ರೇಗಾಡಲು ಪ್ರಾರಂಭಿಸಿದನು. ಆದರೆ ಮಗನು ಶಾಂತನಾಗಿ ತಂದೆಗೆ ಹೇಳಿದ, “ಅಪ್ಪ! ನೀವೇನೂ ಚಿಂತಿಸಬೇಡಿ. ನಾನು ಕೆಲವೇ ನಿಮಿಷಗಳಲ್ಲಿ ಈ ನಕ್ಷೆಯನ್ನು ಮತ್ತೆ ಜೋಡಿಸುತ್ತೇನೆ”. ತಂದೆಗೆ ಬಹಳ ಆಶ್ಚರ್ಯ! ಅದು ಹೇಗೆ ಆ ಸಣ್ಣ ಮಗನು ಹರಿದುಹೋಗಿರುವ ವಿಶ್ವನಕ್ಷೆಯನ್ನು ಜೋಡಿಸಬಲ್ಲ?! ಎಂದು
ಮಗ ಅವನ ಕೊಠಡಿಗೆ ಹೋಗಿ, ಕೆಲವು ನಿಮಿಷಗಳಲ್ಲೇ ಹೊರಬಂದು ಸರಿಯಾಗಿ ಜೋಡಿಸಿದ್ದ ವಿಶ್ವದ ನಕ್ಷೆಯನ್ನು ತಂದೆಗೆ ಕೊಟ್ಟನು. ತಂದೆಯು ತನ್ನ ಕಣ್ಣನ್ನು ತಾನೇ ನಂಬದಾದನು. ‘ಅದು ಹೇಗೆ ಇಷ್ಟು ಸ್ವಲ್ಪ ಸಮಯದಲ್ಲಿ ವಿಶ್ವನಕ್ಷೆಯನ್ನು ಜೋಡಿಸಿದೆ?’ ಎಂದು ಕೇಳಲು, ಮಗ ಉತ್ತರಿಸಿದ. ‘ಈ ನಕ್ಷೆಯ ಹಿಂದೆ ಒಂದು ತಂದೆ, ತಾಯಿ, ಮಕ್ಕಳ ಕುಟುಂಬದ ಚಿತ್ರವಿತ್ತು. ನಾನು ಆ ಚಿತ್ರವನ್ನು ಸರಿಯಾಗಿ ಜೋಡಿಸಿ, ಅದನ್ನು ತಿರುಗಿಸಿದೆ. ವಿಶ್ವ ನಕ್ಷೆ ಸಿದ್ಧವಾಗಿತ್ತು!’ ಎಂದು.
ಕುಟುಂಬಗಳು ಒಂದಾಗಿದ್ದರೆ ಮಾತ್ರ ವಿಶ್ವವು ಒಂದಾಗಿರುತ್ತದೆ. ಕುಟುಂಬದಲ್ಲಿ ವಾದ-ವಿವಾದಗಳು, ಘರ್ಷಣೆಗಳು, ಕೋಪ-ತಾಪಗಳಿದ್ದು, ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುತ್ತೇನೆಂದು ಹೊರಡುವುದು ಮೂರ್ಖತನ. ಕುಟುಂಬದ ಸದಸ್ಯರಲ್ಲಿ ಸೌಹಾರ್ದತೆ, ಸಾಮರಸ್ಯ, ಒಗ್ಗಟ್ಟು, ತ್ಯಾಗ ಮನೋಭಾವಗಳಿದ್ದರೆ ಮಾತ್ರ ವಿಶ್ವದಲ್ಲಿ ಸುಖ-ಶಾಂತಿಗಳು ನೆಲೆಸಬಲ್ಲವು.
'ತಂದೆತಾಯಿಯರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ' ಎಂಬ ಮಕ್ಕಳ ಮನದ ಮಾತುಗಳೇ ಇಂಗ್ಲೀಷಿನಲ್ಲಿ ಕುಟುಂಬವಾಗಿದೆ. ಅಂದರೆ Father And Mother I Love You ಈ ವಾಕ್ಯದ ಮೊದಲ ಅಕ್ಷರಗಳನ್ನು ಸೇರಿಸಿದರೆ ನಮಗೆ ಸಿಗುವುದು FAMILY ಅಂದರೆ 'ಕುಟುಂಬ!'. ನಾವು ನಮ್ಮ ಕುಟುಂಬದತ್ತ ಗಮನಹರಿಸಿ, ಸಂಬಂಧಗಳನ್ನು ಮಧುರವಾಗಿರಿಸಿಕೊಂಡರೆ, ದೇವರು ಅವನ ಕುಟುಂಬವಾದ ಈ ವಿಶ್ವವನ್ನು ನೋಡಿಕೊಳ್ಳುತ್ತಾನೆ.
ಶ್ರೀಕೃಷ್ಣಾರ್ಪಣಮಸ್ತು
No comments:
Post a Comment
welcome to dgnsgreenworld Family