www.dgnsgreenworld.blogspot.com

Thursday, August 8, 2019

ಆತ್ಮಜ್ಞಾನದಿಂದ ಅಮೃತತ್ವ

SAVE NATURE, HEALTHY, WEALTHY & WISE. dgnsgreenworld Family

ಆತ್ಮಜ್ಞಾನದಿಂದ ಅಮೃತತ್ವ

 ಶ್ರೀವಾಣಿ

ಆತ್ಮಜ್ಞಾನದಿಂದ ಅಮೃತತ್ವ


ಶ್ರೀ ಸಿದ್ಧೇಶ್ವರ ಸ್ವಾಮೀಜಿ

ನಾವು ತೊಡುವ ಬಟ್ಟೆ ಸ್ವಚ್ಛವಾಗಿದ್ದರೆ, ಸುಂದರವಾಗಿದ್ದರೆ ನಮ್ಮ ಜೀವನವೂ ಅಷ್ಟೇ ಸುಂದರವಾಗಿರುತ್ತದೆ, ಸ್ವಚ್ಛವಾಗಿರುತ್ತದೆ. ಬಟ್ಟೆ ಎಂದಮೇಲೆ ಹಾಸು-ಹೊಕ್ಕು ಎರಡೂ ಇರಲೇಬೇಕು. ವಿದ್ಯೆ, ಅವಿದ್ಯೆ ಅಥವಾ ಜ್ಞಾನ ಮತ್ತು ಕರ್ಮ ಇವೆರಡೂ ನಮ್ಮ ಬಾಳ-ಬಟ್ಟೆಯ ಹಾಸು-ಹೊಕ್ಕು. ಅವೆರಡರಲ್ಲಿ ಒಂದಿಲ್ಲದಿದ್ದರೂ ನಮ್ಮ ಬಾಳಬಟ್ಟೆಯು ಸಿದ್ಧವಾಗಲಾರದು. ವಿದ್ಯೆ ಎಂದರೆ ಜ್ಞಾನ ಮಾಡಿಕೊಳ್ಳುವುದು, ಅವಿದ್ಯೆ ಎಂದರೆ ಕರ್ಮ ಅಥವಾ ದುಡಿಯುವುದು ಎಂದರ್ಥ. ಲಕ್ಷಾಂತರ ವರುಷದ ಜೀವವಿಕಾಸದ ಕಥೆಯನ್ನು ನೋಡಿದರೂ ಜ್ಞಾನ ಮತ್ತು ಕರ್ಮ ಇವೆರಡೇ ಮಾನವನ ಎಲ್ಲ ಪ್ರಗತಿಗೆ ಕಾರಣವಾಗಿವೆ.

ವಿದ್ಯಾಂಚಾವಿದ್ಯಾಂಚ ಯಸ್ತದ್ವೇದೋಭಯಂ ಸಹ |

ಅವಿದ್ಯಯಾ ಮೃತ್ಯುಂ ತೀತ್ರ್ವಾ ವಿದ್ಯಯಾಮೃತತ್ವಮಶ್ನುತೇ ||

(ಈ.ಉ.11)

ಆತ್ಮವಿದ್ಯೆ ಹಾಗೂ ನಿಷ್ಕಾಮಕರ್ಮಗಳೆರಡೂ ಭಿನ್ನವಲ್ಲ. ಅವೆರಡನ್ನು ಕೂಡಿಯೇ ಅರಿಯಬೇಕು; ಅಳವಡಿಸಿಕೊಳ್ಳಬೇಕು. ಸಾಧಕನು ನಿಷ್ಕಾಮ ಕರ್ಮದಿಂದ ಮೃತ್ಯುವನ್ನು ದಾಟುತ್ತಾನೆ. ಆತ್ಮಜ್ಞಾನದಿಂದ ಅಮೃತತ್ವವನ್ನು ಹೊಂದುತ್ತಾನೆ.

ನಾವು ಮಾಡುವ ಕರ್ಮಗಳ ಉದ್ದೇಶ ಸರಿಯಾಗಿಲ್ಲದಿದ್ದರೆ ಆತ್ಮಜ್ಞಾನ ಅಥವಾ ಅತ್ಮಾನಂದವು ದೊರೆಯಲಾರದು. ಪರಮಸತ್ಯ ಪರಮಾತ್ಮನ ಅರಿವಿಲ್ಲದೆ ಮಾಡಿದ ಕರ್ಮವು ಬಂಧನಕ್ಕೆ ಕಾರಣವಾಗುತ್ತದೆ. ಬರೀ ಪ್ರಾಪಂಚಿಕ ಆಶೆ-ಆಕಾಂಕ್ಷೆಗಳ ಪೂರೈಸುವುದೇ ಕರ್ಮಗಳ ಉದ್ದೇಶವಲ್ಲ. ಅದಕ್ಕಿಂತಲೂ ಶ್ರೇಷ್ಠವಾದ ಉದ್ದೇಶವು ನಾವು ಮಾಡುವ ಕರ್ಮಕ್ಕೆ ಇದೆ. ಜೀವನದಲ್ಲಿ ಪರಮಶಾಂತಿ, ಪರಮಾನಂದವನ್ನು ಪಡೆಯುವುದೇ ನಾವು ಮಾಡುವ ಎಲ್ಲ ಕರ್ಮಗಳ ಪರಮೋದ್ದೇಶವಾಗಿದೆ.

ಓರ್ವ ಕಲಾವಿದನ ಕೈಯಲ್ಲಿ ಒಂದು ಕುಂಚ ಸಿಕ್ಕರೆ ಸಾಕು ಒಂದು ಸುಂದರವಾದ ಕಲಾಕುಸುಮವು ಅರಳಿಬಿಡುತ್ತದೆ. ಬೇರೆಯವರ ಕೈಯಲ್ಲಿ ಸಿಕ್ಕರೆ ಸುಂದರವಾದ ಕಲೆಯೂ ಕೆಟ್ಟು ಹೋಗುತ್ತದೆ. ನೂರು ವಸಂತಗಳ ನಮ್ಮ ಆಯುಷ್ಯವೇ ಚಿತ್ರ ಬರೆಯುವ ಪರದೆ. ಸುಂದರವಾದ ಕರ್ಮಗಳೆಂಬ ಕುಂಚನ್ನು ಹಿಡಿದು, ಭಾವದ ಬಣ್ಣನ್ನು ಬಳಸಿ, ಜ್ಞಾನದ ಬೆಳಕಿನಲ್ಲಿ ನಾವು ನಮ್ಮ ಜೀವನದ ಅಪ್ರತಿಮವಾದ ಚಿತ್ರವನ್ನು ಬರೆಯಬಹುದಾಗಿದೆ. ಹೀಗೆ ಸುಜ್ಞಾನ, ಸತ್ಕರ್ಮಗಳಿಂದ ನಾವು ಈ ಜಗತ್ತಿನಲ್ಲಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು. ಪರಮಶಾಂತಿ, ಪರಮಾನಂದವನ್ನು ಅನುಭವಿಸಬೇಕು, ಇಲ್ಲದಿದ್ದರೆ ನಮ್ಮ ಜೀವನವು

ನಿರರ್ಥಕವಾದಂತೆಯೇ!

ಪ್ರಜಾಪ್ರೇಮಿಯಾದ ಮಹಾರಾಜ. ಅಂದು ಅವನ ಹುಟ್ಟುಹಬ್ಬ. ತನ್ನಿಮಿತ್ಯ ರಾಜನು ತನ್ನ ಪ್ರಜೆಗಳಿಗೆಲ್ಲ ಸಂತೋಷಕೂಟವನ್ನು ಏರ್ಪಡಿಸಿದ್ದ. ಇಷ್ಟೇ ಅಲ್ಲ ತನ್ನ ಹುಟ್ಟುಹಬ್ಬದ ದಿವಸ ಯಾರಾದರೂ ಅರಮನೆಗೆ ಬಂದು ತನ್ನನ್ನು ಭೇಟಿಯಾಗಬಹುದು ಎಂದು ಡಂಗುರ ಸಾರಿಸಿದ. ರಾಜನ ದರ್ಶನ ಹಾಗೂ ಸಂತೋಷಕೂಟ ಎರಡೂ ದೊರೆಯುತ್ತವೆ ಎಂದಮೇಲೆ ಕೇಳುವುದೇನಿದೆ? ಊರಿಗೆ ಊರೇ ಅರಮನೆಯತ್ತ ಮುಖ ಮಾಡಿತು. ರಾಜನ ದರ್ಶನಕ್ಕಾಗಿ ಅರಮನೆಗೆ ಬರುವವರಿಗೆಲ್ಲ ದಾರಿಯುದ್ದಕ್ಕೂ ಬಗೆ ಬಗೆಯಾದ ತಿಂಡಿ-ತಿನುಸುಗಳು, ಬಟ್ಟೆ-ಬರೆ, ಉಡಿಗೆ-ತೊಡಿಗೆಗಳನ್ನು, ಸಂಗೀತ-ನೃತ್ಯವನ್ನೂ ಉಚಿತವಾಗಿ ಕೊಡುವ ಏರ್ಪಾಡು ಮಾಡಿದ್ದರು. ಬಂದವರೆಲ್ಲರೂ ಉಚಿತವಾಗಿದ್ದ ತಿಂಡಿ-ತಿನುಸು, ಉಡಿಗೆ-ತೊಡಿಗೆ, ಸಂಗೀತ-ನೃತ್ಯಗಳಲ್ಲಿಯೇ ಮಗ್ನರಾಗಿ ಬಿಟ್ಟರು. ಅರಮನೆಯ ಹೂದೋಟದಲ್ಲಿದ್ದ ರಾಜನತ್ತ ಯಾರೊಬ್ಬರೂ ಹೋಗಲಿಲ್ಲ. ಸಂಜೆಯ ಸಮಯಕ್ಕೆ ಒಬ್ಬ ಹಿರಿಯ ಅನುಭವಿಕ ರೈತನು ಅರಮನೆಗೆ ಬಂದ. ತಕ್ಷ ಣ ರಸ್ತೆಯ ಬದಿಯಲ್ಲಿದ್ದ ಅಂಗಡಿಯವರು ಬನ್ನಿ ಬನ್ನಿ ಎಂದು ಕರೆದು 'ಇದರಲ್ಲಿ ನಿಮಗೇನು ಬೇಕು ತೆಗೆದುಕೊಳ್ಳಿ, ಎಲ್ಲವೂ ಉಚಿತ' ಎಂದು ಹೇಳಿದರು. ರೈತ ಹೇಳಿದ 'ನನಗೇನೂ ಬೇಡ, ಮಹಾರಾಜನಿಗೆ ಭೆಟ್ಟಿಯಾಗಬೇಕು ಅಷ್ಟೇ!' ಇಷ್ಟು ಹೇಳಿ ರೈತನು ನೇರವಾಗಿ ಹೂದೋಟದಲ್ಲಿದ್ದ ರಾಜನಿಗೆ ಭೇಟಿಯಾದ. 'ಬೆಳಗಿನಿಂದ ಸಂಜೆಯವರೆಗೆ ದಾರಿ ಕಾಯ್ದರೂ ಯಾರೂ ಬಂದಿರಲಿಲ್ಲ, ಈಗ ನೀನೊಬ್ಬನಾದರೂ ಬಂದೆಯಲ್ಲಾ' ಎಂದು ರಾಜನು ವಾತ್ಸಲ್ಯದಿಂದ ರೈತನನ್ನು ಆಲಂಗಿಸಿದಾಗ ಈರ್ವರ ಕಣ್ಣುಗಳಲ್ಲಿ ಆನಂದ ಭಾಷ್ಪ ಧಾರೆಯಿಟ್ಟಿತ್ತು!!

ನಾವಿರುವ ಈ ಪ್ರಪಂಚವೇ ಪರಮಾತ್ಮನ ಹೂದೋಟ. ನಾವೆಲ್ಲರೂ ಪ್ರಜೆಗಳು. ಭಕ್ತ ವತ್ಸಲನಾದ ಪರಮಾತ್ಮನು ನಮಗೆ ದರ್ಶನವನ್ನಿತ್ತು ನಮ್ಮನ್ನು ಉದ್ಧರಿಸಬೇಕೆಂದು ನಮಗಾಗಿ ನಿತ್ಯ ದಾರಿ ಕಾಯುತ್ತಾನೆ. ಪ್ರಪಂಚದ ವಿಷಯ ವ್ಯಾಮೋಹಗಳಲ್ಲಿ ಆಕಂಠಪೂರ್ತಿ ಮುಳುಗಿದ ನಮಗೆ ಆ ಮಹಾದೇವನತ್ತ ಹೋಗಲು ಸಮಯವೆಲ್ಲಿದೆ? ಬುದ್ಧ, ಬಸವ, ಮಹಾವೀರ, ಜ್ಞಾನೇಶ್ವರ ಮೊದಲಾದ ಬೆರಳಣಿಕೆಯ ಮಹಾತ್ಮರು ಮಾತ್ರ ಪ್ರಪಂಚದ ಎಲ್ಲ ಬಂಧನಗಳನ್ನು ಹರಿದೊಗೆದು ಆ ಪರಮಾತ್ಮನ ದಿವ್ಯ ದರ್ಶನ ಪಡೆದು ಧನ್ಯರಾದರು.

ಆಧಾರ : ಈಶ ಪ್ರಸಾದ

ವಂದನೆಗಳೊಂದಿಗೆ dgnsgreenworld

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World