ಹದಿ ಹರಯ!
ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ,
ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ.
ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ,
ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ.
ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ,
ಎಷ್ಟೋ ಜನಕ್ಕೆ ಅಕ್ಕ ಅಣ್ಣಂದಿರೇ ಇರುವುದಿಲ್ಲ.
ಅಪ್ಪ ಕೇಳಿದ್ದೆಲ್ಲ ತಂದುಕೊಡಲಿಲ್ಲ ಎಂದು ನೀ ಬೇಸರಿಸಬೇಡ,
ಎಷ್ಟೋ ಮಕ್ಕಳ ಅಪ್ಪ ಬಾರು ಬಿಟ್ಟು ಮನೆಗೇ ಬರುವುದಿಲ್ಲ.
ಅಮ್ಮ ಮಾಡಿದ ತಿಂಡಿ ಚೆನ್ನಾಗಿಲ್ಲ ಎಂದು ನೀ ಮೂಗು ಮುರಿಯಬೇಡ,
ಎಷ್ಟೋ ಜನರ ಮನೆಯಲ್ಲಿ ಬೆಳಗ್ಗೆ ತಂಗಳನ್ನಕ್ಕೂ ಗತಿ ಇರುವುದಿಲ್ಲ.
ಗುರು ಹಿರಿಯರು ತಿದ್ದಿ ತೀಡುತ್ತಾರೆಂದು ನೀ ಹಳಿಯಬೇಡ,
ಎಷ್ಟೋ ಜನರಿಗೆ ಶಾಲೆಗೆ ಹೋಗುವ ಭಾಗ್ಯವೇ ಇರುವುದಿಲ್ಲ.
ಜನರು ನಿನ್ನ ನಡೆ - ನುಡಿ, ಉಡುಗೆ - ತೊಡುಗೆಗಳನ್ನು ಸದಾ ಕಾಲ ಹದ್ದಿನ ಕಣ್ಣಿಟ್ಟು ಗಮನಿಸಿ ಮಾತನಾಡಿಕೊಳ್ಳುತ್ತಾರೆಂದು ಸಮಾಜವನ್ನು ದ್ವೇಷಿಸಬೇಡ,
ಯಾಕೆಂದರೆ ಬೆಂಗಳೂರಿನಂಥ ನಗರಗಳಲ್ಲಿ ನೀನು ಕುಡಿದು ತೂರಾಡುತ್ತಾ ಸಭ್ಯತೆಯ ಎಲ್ಲೆ ಮೀರಿ ಬೆತ್ತಲಾಗಿ ಚರಂಡಿಯಲ್ಲಿ ಬಿದ್ದರೂ ಯಾರೂ ನಿನ್ನ ಕಡೆ ಕಣ್ಣು ಹಾಯಿಸುವುದೂ ಇಲ್ಲ.
ಎಲ್ಲಿಗೆ ಹೋದೆ? ಯಾಕೆ ಹೋದೆ? ಇಷ್ಟೇಕ ತಡ? ಇಷ್ಟೇಕೆ ಬೇಗ? ಅದು ಏನು? ಇದು ಯಾಕೆ? ಅವರು ಯಾರು? ಇದು ಬೇಕಾ? ಅಂತ ಎಲ್ಲವನ್ನೂ ಪ್ರಶ್ನಿಸುತ್ತಾರೆಂದು ಸಿಡುಕಬೇಡ,
ಎಷ್ಟೋ ಜನರಿಗೆ ನಮ್ಮವರು - ತಮ್ಮವರು, ಹಿಂದು ಮುಂದು, ಬಂಧು - ಬಾಂಧವರು, ಹೇಳುವವರು - ಕೇಳುವವರೇ ಇರುವುದಿಲ್ಲ!
ಇತ್ತ ನೋಡು,
ಭಗವಂತ ನಿನಗೆ ಕೊಟ್ಟ ಭಾಗ್ಯ, ಅಪ್ಪ ಅಮ್ಮ ಅಣ್ಣ ಅಕ್ಕ, ಕುಟುಂಬ, ನೆಂಟರಿಷ್ಟರು, ಗುರು ಹಿರಿಯರು ಮತ್ತು ಸಮಾಜವೆಂಬ ಬಂಧನ. ನಿನ್ನ ರಕ್ಷೆಗೆಂದು ಭಗವಂತನೇ ಕಟ್ಟಿದ ರಕ್ಷಾ ಬಂಧನ!
ಒಂದು ವೇಳೆ ನೀ ಪ್ರಾಣಿಯಾಗಿ ಹುಟ್ಟಿದ್ದಿದ್ದರೆ ಈ ಬಂಧನಗಳ್ಯಾವುದೂ ನಿನಗೆ ಇರುತ್ತಲೇ ಇರಲಿಲ್ಲ.
ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ! ಅನ್ನುವ ದಾಸವಾಣಿ ನಿನಗೆ ಅರ್ಥವೂ ಆಗುತ್ತಿರಲಿಲ್ಲ!
ತಮ್ಮ/ತಂಗಿ,
ಉಳಿಯ ಪೆಟ್ಟು ಬೀಳದಿದ್ದರೆ ಶಿಲೆಯೊಂದು ಮೂರ್ತಿಯಾಗಲು ಸಾಧ್ಯವೇ?
ಹಿರಿಯರ ಬುದ್ಧಿವಾದ ಕೇಳದೇ ಪರಿಪೂರ್ಣ ವ್ಯಕ್ತಿತ್ವ ಪಡೆದ ಜನರು ಈ ಜಗದಲ್ಲಿರುವರೇ?
ನೀನು ದ್ವೇಷಿಸಬೇಕಾಗಿದ್ದು ವಯೋಸಹಜ ಅಹಂಕಾರ, ಜಂಭ, ಮದ, ದೌರ್ಬಲ್ಯ, ಆಕರ್ಷಣೆ, ಚಿತ್ತ ಚಂಚಲತೆ, ಸ್ವಾರ್ಥಗಳನ್ನೇ ಹೊರತು, ಅವುಗಳಿಗೆ ಬಲಿಯಾಗದಂತೆ ಸದಾ ಕಾಲ ನಿನ್ನನ್ನು ರಕ್ಷಿಸುವ ಅಪ್ಪ, ಅಮ್ಮ, ಅಣ್ಣ, ಅಕ್ಕ, ಗುರು - ಹಿರಿಯರು, ನೆಂಟರಿಷ್ಟರು ಮತ್ತು ಸಮಾಜವನ್ನಲ್ಲ.
ಚಿಂತಿಸು, ಭಾವಿಸು, ಯೋಚಿಸು,
ಪರಿಪೂರ್ಣವಾಗಲು ಭಗವಂತ ನಿನಗೆ ಕೊಟ್ಟ ಅವಕಾಶಕ್ಕಾಗಿ ಅವನಿಗೆ ವಂದಿಸು! ಬರುವ ಜನ್ಮದಲ್ಲೂ ಪ್ರತಿ ಜನ್ಮದಲ್ಲೂ ಮತ್ತೆ ಮತ್ತೆ ಇಲ್ಲೇ ಹುಟ್ಟುವಂತಾ ವರವನ್ನು ಪ್ರಾರ್ಥಿಸು!
dgnsgreenworld
("ನನ್ನ ಜೀವನ - ನನ್ನಿಷ್ಟ" ಎನ್ನುವ ಮನೆಹಾಳು ಸಿದ್ಧಾಂತದ ಬೆನ್ನು ಬಿದ್ದ ಎಲ್ಲ ಹದಿಹರಯದ ಯುವಕ ಯುವತಿಯರಿಗೆ ಸಮರ್ಪಣೆ.)
No comments:
Post a Comment
welcome to dgnsgreenworld Family