www.dgnsgreenworld.blogspot.com

Thursday, March 26, 2020

ಒಂದು ಸಣ್ಣ ಕಥೆ*

SAVE NATURE : HEALTHY, WEALTHY & WISE. dgnsgreenworld Family
*ಒಂದು ಸಣ್ಣ ಕಥೆ*

ಒಂದು ಗ್ರಾಮದಲ್ಲಿ ಅಪ್ರತಿಮ ದೈವಭಕ್ತನಾದ ವ್ಯಕ್ತಿಯೊಬ್ಬನಿದ್ದ. ತನ್ನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ದೇವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದ ಅವನ ಮೇಲೆ ಊರಿನವರಿಗೆಲ್ಲ ಅತಿಯಾದ ಗೌರವವಿತ್ತು.

ಹೀಗಿರಲು ಒಂದು ದಿನ ಸಾಯಂಕಾಲ ಅವನಿಗೆ ಪಕ್ಕದೂರಿಗೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತು. ಆದರೆ ಆ ಊರಿಗೆ ಹೋಗಲು ಒಂದು ದೊಡ್ಡ ಕಾಡನ್ನು ದಾಟಿ ಹೋಗಬೇಕಾಗಿತ್ತು. ಆ ಕಾಡಿನಲ್ಲಿ ಅತ್ಯಂತ ಕ್ರೂರ ಮೃಗಗಳು ವಾಸಿಸುತ್ತಿದ್ದವು. ಕತ್ತಲೆ ಬೇರೆ.  ರಾತ್ರಿ ವೇಳೆಯಲ್ಲಿ ಆ ಕಾಡನ್ನು ದಾಟಲು ಪ್ರಯತ್ನಿಸಿದ ಯಾರೊಬ್ಬರೂ ಆ ಕಡೆ ತಲುಪಿದ ಉದಾಹರಣೆ ಇರಲಿಲ್ಲ.

ಅವನ ಅನಿವಾರ್ಯತೆಯನ್ನು ತಿಳಿದ ಮಿತ್ರರನೇಕರು ರಾತ್ರಿ ಕಾಡನ್ನು ದಾಟದಿರುವಂತೆಯೂ ಮಾರನೇಯ ದಿನ ಬೆಳಗ್ಗೆ ಹೋಗುವಂತೆಯೂ ಅವನ ಮನವೊಲಿಸಲು ಪ್ರಯತ್ನಿಸಿದರು. ಆದರೆ ‘ನನಗೆ ದೇವರಿದ್ದಾನೆ, ಏನೂ ಆಗುವುದಿಲ್ಲ’ ಎಂಬ ಧೈರ್ಯದಿಂದಾಗಿ ಅವನು ಹೋಗಲು ತೀರ್ಮಾನಿಸಿದ.

ವಿಷಯ ತಿಳಿದ ಅವನ ಧಾರ್ಮಿಕ ಗುರುಗಳು ಅವನನ್ನು ತಡೆದರು ‘ಇಲ್ಲ ಗುರೂಜಿ, ನನಗೆ ಹೋಗಲೇ ಬೇಕು, ದೇವರಿದ್ದಾನೆ, ನನಗೇನೂ ಆಗುವುದಿಲ್ಲ’ ಎಂದನಾತ.
ಊರಿನ ಪ್ರಧಾನ ಅವನ ಬಳಿ ಬಂದು ರಾತ್ರಿ ಹೋಗದಂತೆಯೂ ಮಾರನೇಯ ದಿನ ಬೆಳಗ್ಗೆ ಹೋಗುವಂತೆಯೂ ವಿನಂತಿಸಿದ. ‘ದೇವರಿದ್ದಾನೆ, ನನಗೇನೂ ಆಗುವುದಿಲ್ಲ’ ಎಂದು ಉತ್ತರಿಸಿದ.
ಕಾಡಿನ ಬಳಿ ತಲುಪುವಷ್ಟರಲ್ಲಿ  ಗ್ರಾಮದ ಕಾವಲುಗಾರ ಓಡೋಡಿ ಬಂದ ‘ಸ್ವಾಮೀ, ಈಗ ಹೋಗಬೇಡಿ, ಕ್ರೂರ ಮೃಗಗಳು ನಿಮ್ಮನ್ನು ಬೇಟೆಯಾಡುತ್ತವೆ’ ಎಂದು ನಿವೇದಿಸಿದ. ‘ಸುಮ್ನಿರು, ನನಗೇನೂ ಆಗುವುದಿಲ್ಲ, ದೇವರಿದ್ದಾನೆ’ ಎಂದು ಹೇಳಿ ಆತ ಮುನ್ನಡೆದ.

ಕಾಡನ್ನು ಪ್ರವೇಶಿಸುವಾಗ ಒಂದು ಕಾಡುಪ್ರಾಣಿ ಅವನೆದುರು ಬಂತು. ತಕ್ಷಣ ಪಕ್ಕದಲ್ಲಿದ್ದ ಕೋಲೊಂದನ್ನು ತೆಗೆದು ಅದನ್ನು ಓಡಿಸಿದ.
ಮುಂದಕ್ಕೆ ಹೋಗುವಾಗ ತೋಳಗಳ ಗುಂಪೊಂದು ಕೊಂದ ಮಾನವನ ದೇಹವೊಂದನ್ನು ಎಳೆದಾಡುತ್ತಾ ಅವನೆದುರಿನಿಂದ ಹೋದವು. ಆದರೆ ಅದಾವುದನ್ನೂ ಲೆಕ್ಕಿಸದೆ ಅತಿಯಾದ ಧೈರ್ಯದಿಂದ ಮುಂದೆ ನಡೆದ.

ಆದರೆ ಈ ನಡೆಯು ಬಹಳಷ್ಟು ಸಾಗಲಿಲ್ಲ. ಸಿಂಹವೊಂದು ಅವನ ಮೇಲೆರಗಿ ಅವನನ್ನು ಕೊಂದೇ ಬಿಟ್ಟಿತು.

ಈಗ ಆತನು ದೇವರನ್ನು ಭೇಟಿ ಮಾಡುವ ಸಮಯ
‘ದೇವರೇ, ನೀನು ನನಗೆ ಮೋಸ ಮಾಡಿದೆ’ ಆತ ದೂರಿಕೊಂಡ
‘ವತ್ಸಾ, ನಾನು ಯಾರಿಗೂ ಮೋಸ ಮಾಡುವುದಿಲ್ಲ’ ದೇವರು ಮುಗುಳ್ನಕ್ಕರು.
‘ಇಲ್ಲ, ನೀನು ನನಗೆ ಮೋಸ ಮಾಡಿದೆ. ಇಲ್ಲಾಂದ್ರೆ ಇಷ್ಟು ವರ್ಷ ನಿನ್ನನ್ನು ಪೂಜಿಸಿದ್ದಕ್ಕೆ, ನಿನ್ನ ಭಕ್ತಿ ಮಾಡಿದ್ದಕ್ಕೆ ನನ್ನನ್ನು ಕಾಡುಪ್ರಾಣಿಗೆ ಬಲಿ ಮಾಡಿದೆಯಲ್ಲ. ಒಂದು ಮುನ್ಸೂಚನೆಯನ್ನೂ ಕೊಡಲಿಲ್ಲ ನೀನು ನನಗೆ’ ಆತ ಮತ್ತೆ ದೂರಿದ.

*‘ವತ್ಸಾ, ಯಾರು ಹೇಳಿದ್ದು ಮುನ್ಸೂಚನೆ ಕೊಟ್ಟಿಲ್ಲ ಅಂತ?? ನೀನು ಭಂಡ ಧೈರ್ಯ ತೆಗೆದುಕೊಂಡು ಪ್ರಯಾಣ ಆರಂಭಿಸಿದಾಗ ನಿನ್ನ ಗುರುಗಳ ರೂಪದಲ್ಲಿ ನಿನ್ನನ್ನು ತಡೆಯಲು ಪ್ರಯತ್ನಿಸಿದೆ. ಬಳಿಕ ಊರಿನ ಪ್ರಧಾನನ ರೂಪದಲ್ಲಿ ಬಂದೆ, ಕಾವಲುಗಾರನ ರೂಪದಲ್ಲಿ ಬಂದೆ, ಕಾಡುಪ್ರಾಣಿಯ ರೂಪದಲ್ಲಿ ಬಂದೆ, ಕಡೆಗೆ ಈ ಮೊದಲು ಆ ಕಾಡನ್ನು ದಾಟಲು ಪ್ರಯತ್ನಿಸಿದ ಓರ್ವನ ದೇಹವನ್ನು ತೋಳಗಳು ಕೊಂದು ಎಳೆದಾಡುತ್ತಿದ್ದುದನ್ನು ನಿನಗೆ ತೋರಿಸಿದೆ. ಆದರೆ ನೀನು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಅಧಿಕಪ್ರಸಂಗದಿಂದ ಮುನ್ನಡೆದೆ. ಈಗ ಹೇಳು, ನಾನು ನಿನಗೆ ಮೋಸ ಮಾಡಿದ್ದೇನೆಯೇ?’*
***********

ಮಿತ್ರರೇ,
ಕೊರೋನಾ ವೈರಸ್ ಜಗತ್ತನ್ನೇ ಆವರಿಸಿದೆ. ಮನೆಯಿಂದ ಹೊರಬರಬೇಡಿ ಎಂದು ತಿಳಿದವರು ಹೇಳುತ್ತಿದ್ದಾರೆ. ಟಿವಿ, ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ನೋಡುತ್ತಾ ಇದ್ದೇವೆ. ಸರಕಾರ, ಜಿಲ್ಲಾಧಿಕಾರಿ, ಪೊಲೀಸರು, ಆರೋಗ್ಯ ಇಲಾಖೆಯವರು ಪದೇ ಪದೇ ವಿನಂತಿಸಿಕೊಳ್ಳುತ್ತಿದ್ದಾರೆ. ಇತರ ದೇಶಗಳಲ್ಲಿ ಸಾವಿಗೀಡಾದವರ ಫೋಟೋಗಳನ್ನು, ವಿಡಿಯೋಗಳನ್ನು ನೋಡ್ತಾ ಇದ್ದೇವೆ. ನಮಗೆ ಇನ್ನೂ ಬುದ್ಧಿ ಯಾವಾಗ ಬರುತ್ತದೆ? ದೇವರಿದ್ದಾನೆ ಎಂಬ ಭಂಡ ಧೈರ್ಯವೋ, ನನಗೇನೂ ಆಗಲ್ಲ ಎಂಬ ಅಹಂಕಾರವೋ ಯಾವುದೂ ಈಗ ನಡೆಯಲ್ಲ. ಕೊರೋನಾ ಎಂಬ ಕ್ರೂರ ವಿಧಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಉಳಿಯುವುದೇ ಬಿಟ್ಟು ಅನ್ಯ ದಾರಿಯಿಲ್ಲ.
ವಂದೆಗಳೊಂದಿಗೆ

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World