www.dgnsgreenworld.blogspot.com

Friday, June 24, 2022

ಜೀವನಗಂಗೆ

ಜೀವನಗಂಗೆ

ನಮ್ಮ ಜೀವನದ ನದಿಗೆ ಎರಡು ದಂಡೆಗಳು. ಒಂದು ಆದಿ, ಇನ್ನೊಂದು ಅಂತ್ಯ. ಒಂದು ದಿನ ಆರಂಭವಾದ ಈ ಜೀವನದ ನದಿಯು ಜೀವನದ ಕೊನೆಯವರೆಗೆ ನಿರಂತರ ಹರಿಯುತ್ತದೆ. ಜೀವನದ ಈ ನದಿಗೆ ಮೂರು ಅಂಗಗಳು ೧) ಜ್ಞಾನಾಂಗ ೨) ಕ್ರಿಯಾಂಗ ೩) ಭಾವಾಂಗ !

ಮೊದಲನೆಯದು

ಜ್ಞಾನಾಂಗ ಈ ಜಗತ್ತು ವಿಶಾಲವೂ,

ವೈವಿಧ್ಯಮಯವೂ ಆಗಿದೆ. ಇದು ಶಬ್ದ ಸ್ಪರ್ಶ, ರೂಪ, ರಸ, ಗಂಧ ಎಂಬ ಐದು ವಿಷಯಗಳಿಂದ ಕೂಡಿದೆ. ಮೃದು ಮಧುರ ಶಬ್ದಗಳನ್ನ ಕೇಳುವುದಕ್ಕೆ ಕಿವಿಗಳಿವೆ. ಶೀತೋಷ್ಣಾದಿ ಹಿತವಾದ ಸ್ಪರ್ಶವನ್ನು ಅನುಭವಿಸುವುದಕ್ಕೆ ತ್ವಚೆಯಿದೆ. ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ನೋಡುವುದಕ್ಕೆ ಎರಡು ಕಣ್ಣುಗಳಿವೆ. ಷಡ್ರಸಗಳನ್ನು ಸವಿಯುವುದಕ್ಕೆ ನಾಲಿಗೆ ಇದೆ. ಸುಗಂಧಮಯ ಶ್ರೀಗಂಧ ಜಗತ್ತನ್ನು ಅನುಭವಿಸಲು ನಾಸಿಕವಿದೆ. ಸಿರಿವಂತರು, ಬಡವರು, ಮಹಾತ್ಮರು, ಅಲ್ಪಾತ್ಮರು, ದೇವತೆಗಳು ಎಲ್ಲರೂ ಮಾಡುವುದು ಇಷ್ಟೇ ! ಈ ಪಂಚವಿಷಯಗಳನ್ನು ಅನುಭವಿಸುವುದಕ್ಕೆ ಪ್ರಪಂಚವೆಂದು ಕರೆಯುತ್ತಾರೆ. ತೊಟ್ಟಿಲಕ್ಕೆ ಇಳಿದಾಗಿನಿಂದ ಕೊನೆಯ ಉಸಿರು ಇರುವವರೆಗೆ ಎಲ್ಲರೂ ಮಾಡುವುದು ಪಂಚವಿಷಯಗಳ ಒಡನಾಟ. ಈ ಪಂಚವಿಷಯಗಳ ಪರಿಪೂರ್ಣ ಜ್ಞಾನಮಾಡಿಕೊಂಡರೆ ಅದು ನಮ್ಮನ್ನು ಬಂಧಿಸುವುದಿಲ್ಲ. ಈ ಪ್ರಪಂಚದ ಅರಿವನ್ನು ಮಾಡಿಕೊಳ್ಳುವುದೇ ಜ್ಞಾನಾಂಗ,

ಎರಡನೆಯದು ಕ್ರಿಯಾಂಗ : ನಿಸರ್ಗವು ನಮಗೆ ಸಮರ್ಥ ದೇಹ, ಮನ, ಬುದ್ಧಿಯನ್ನು ಕೊಟ್ಟಿದ್ದು ಮೈ ಮುರಿದು ದುಡಿಯಲಿಕ್ಕೆ ವಿನಾ ಮೈಗಳ್ಳರಾಗಿ ಕೂಡಲಿಕ್ಕೆ ಅಲ್ಲ, ಕೈ ಕಾಲುಗಳು ಸಮರ್ಥವಾಗಿರುವ ವರೆಗೆ ನಾವು ದುಡಿದು ಮಾಡಿ ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು. ಒಬ್ಬ ವಿದ್ವಾಂಸರು ಹೇಳುತ್ತಾರೆ - “ನಮ್ಮ ದೇಹದ ಅವಯವಗಳನ್ನು ನಾವು ಬಳಸಿದರೆ ಉಳಿಯುತ್ತವೆ. ಇಲ್ಲದಿದ್ದರೆ ಅಳಿಯುತ್ತವೆ !' ಈ ಮಣ್ಣಿನ ಕಾಯವು ಮಣ್ಣು ಕೂಡುವ ಮೊದಲೇ ನಾವು ಬದುಕಿಗೆ ಬಂಗಾರದ ಬಣ್ಣಕೊಡಬೇಕು. ಈ ಮೃಣ್ಮಯ ದೇಹದಲ್ಲಿಯೇ ಚಿನ್ಮಯ ದೇವನನ್ನು ಕಾಣುವ ಸತ್ಯ ಶುದ್ಧ ಕಾಯಕ ಕರ್ಮ ಮಾಡಬೇಕು ಇದುವೆ ಕ್ರಿಯಾಂಗ !

ಮೂರನೆಯದು ಭಾವಾಂಗ : ನಾವು ಜೀವನದ ಉದ್ದಕ್ಕೂ ಬರೀ ಗಳಿಸುವುದು. ಉಳಿಸುವುದು ಮಾಡಿದರಾಗದು. ಗಳಿಸಿದ್ದನ್ನು ಸತ್ಕಾರ್ಯಕ್ಕೆ ಬಳಸಿ- ಸಂತಸ ಪಡಬೇಕು. ಅನುಭವಿಸಿ ಆನಂದಿಸಬೇಕು. ಆಗ ನಮ್ಮ ಗಳಿಕೆಯು ಸಾರ್ಥಕತೆ ಪಡೆಯುತ್ತದೆ. ಕಷ್ಟ ಪಟ್ಟು ಆಯುಷ್ಯದ ಉದ್ದಕ್ಕೂ ಗಳಿಸಿದ್ದನ್ನು ಅನುಭವಿಸದಿದ್ದರೆ. ಆನಂದಿಸದಿದ್ದರೆ ; ಅದೆಲ್ಲವೂ ನಿರರ್ಥಕ ವಾಗುತ್ತದೆ.

ಒಬ್ಬ ಆಗರ್ಭ ಸಿರಿವಂತ ಭವ್ಯವಾದ ಮನೆ. ಸುತ್ತಮುತ್ತ ಸುಂದರವಾದ ಹೂದೋಟ. ಆದರೆ ಹಣಗಳಿಕೆಯ ವ್ಯಾಮೋಹದಲ್ಲಿ ಮುಳುಗಿಹೋಗಿದ್ದ. ಆ ಸಿರಿವಂತನು ಎಂದೂ ತನ್ನ ಹೂದೋಟದಲ್ಲಿ ಕಾಲಿಟ್ಟಿರಲಿಲ್ಲ. ಒಂದು ದಿನ ಅವನ ಊರಿನಲ್ಲಿ ಜಗತ್ಪಸಿದ್ಧ ಕಲಾವಿದರು ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದರು. ಅಲ್ಲಿ ಒಂದು ಅತ್ಯಂತ ಸುಂದರವಾದ ಒಂದು ಹೂವಿನ ಚಿತ್ರ. ಅದಕ್ಕೆ ಲಕ್ಷಾಂತರ ಹಣಕೊಟ್ಟು ಆ ಸಿರಿವಂತನು ಅದನ್ನು ಮನೆಗೆ ತಂದ. ನೋಡಿದವರೆಲ್ಲ ಸಿರಿವಂತನನ್ನು ಬಾಯಿತುಂಬ ಹೊಗಳಿದರು. ಸಿರಿವಂತನೂ ಅವರಿಗೆ ಹೊಟ್ಟೆ ತುಂಬ ಉಣಿಸಿದ. ಆದರೆ ಆ ಸಿರಿವಂತನ ತೋಟದಲ್ಲಿ ಓರ್ವ ಸಂತರು ಬಂದು ಭಗವಂತನ ಸೃಷ್ಟಿ ಸೌಂದರ್ಯವನ್ನು ಅನುಭವಿಸುತ್ತಿದ್ದರು. ಸಿರಿವಂತನು ಆ ಸಂತರನ್ನು ಕಂಡು ಪೂಜ್ಯರೇ, ಒಳಗೆ ಬನ್ನಿ, ಇಲ್ಲೊಂದು ಲಕ್ಷಾಂತರ ಬೆಲೆಕೊಟ್ಟು ತಂದಿರುವ ಹೂವಿನ ಚಿತ್ರವಿದೆ ನೋಡಬನ್ನಿ'' ಎಂದು ಕರೆದ. ಸಂತರು ಹೇಳಿದರು- “ಸಿರಿವಂತನೆ, ನೀನು ಲಕ್ಷಾಂತರ ಹಣ ತೆತ್ತು ತಂದಿರುವ ಹೂವು ನಿರ್ಜಿವ. ನಾನು ಅನುಭವಿಸುತ್ತಿರುವ ದೇವನು ನಿರ್ಮಿಸಿರುವ ಈ ಅಮೂಲ್ಯವಾದ ಹೂವು ಸಜೀವ !! ಸಚೇತನ !! ಆ ಮಹಾದೇವನ ಅಭಿವ್ಯಕ್ತರೂಪ !!'' ಆ ಸಂತರ ಈ ಅನುಭವದ ಮಾತು ಕೇಳಿ ಸಿರಿವಂತನ ಕಣ್ಣು ತೆರೆದಿತ್ತು!! ಅನುಭವದಿಂದ ಜೀವನ ಸಿರಿವಂತವಾಗುತ್ತದೆ ವಿನಾ ಕೇವಲ ಗಳಿಕೆಯಿಂದಲ್ಲ ಎಂಬುದು ತಿಳಿದಿತ್ತು.

ಓರ್ವ ಸಿರಿವಂತ ಆಯುಷ್ಯದ ಉದ್ದಕ್ಕೂ ಗಳಿಸಿ ಗಳಿಸಿ ಕೋಟ್ಯಾದೀಶನಾದ, ಒಂದು ಬಿಡಿ ಕಾಸನ್ನೂ ಸತ್ಕಾರ್ಯಕ್ಕೆ ಬಳಸಲಿಲ್ಲ. ಒಂದು ದಿನ ಎದೆ ನೋಯುತ್ತದೆಂದು ವೈದ್ಯರ ಬಳಿಗೆ ಹೋದ. ವೈದ್ಯರು ಹೇಳಿದರು. ಸಿರಿವಂತರೆ, ನಿಮ್ಮ ಹೃದಯವು ನಿಮಗಾಗಿ ದುಡಿದು ದುಡಿದು ದಣಿದಿದೆ. ಈಗ ಅದು ಶಾಶ್ವತವಾಗಿ ವಿಶ್ರಾಂತಿ ಪಡೆಯಲಿದೆ !!” ವೈದ್ಯರ ಮಾತು ಕೇಳಿ ಸಿರಿವಂತನ ಕಣ್ಣು ತೆರೆದಿತ್ತು. ನಾನು ಬರೀ ಗಳಿಸಿದೆ. ನನಗಾಗಿ ನನ್ನವರಿಗಾಗಿ ಬಳಸಲಿಲ್ಲ. ಅನುಭವಿಸಲಿಲ್ಲ. ಆನಂದಿಸಲಿಲ್ಲ! ಎಂಬ ಅರಿವಾಗಿತ್ತು. ಆದರೆ ಕಾಲ ಮಿಂಚಿತ್ತು. ಹೃದಯ ನಿಂತಿತ್ತು!!

ನಮ್ಮ ಬದುಕಿನಲ್ಲಿರುವ ಈ ಜ್ಞಾನಾಂಗ, ಕ್ರಿಯಾಂಗ, ಅನುಭಾವಾಂಗ ಸರಿಸಮನಾಗಿ ಬೆಳೆಯಬೇಕು, ಅದು ಆದರ್ಶ ಅನುಕರಣೀಯ ಬದುಕು, ಇಂಥ ಬದುಕನ್ನು ಸಾಗಿಸಿದವರು ನಮಗೆಲ್ಲ ಆದರ್ಶರು. ನೆಪೋಲಿಯನ್ ಬೋನಾಪಾರ್ಟ ಪ್ರಾನ್ಸ್ ದೇಶದ ದೊರೆ. ಶಾಲಾ ಬಾಲಕನಿದ್ದಾಗ ಶಾಲೆಯ ಎದುರಿನ ಹಣ್ಣು ಮಾರುವ ಅಂಗಡಿಯ ಅಜ್ಜಿಯಿಂದ ಹಣ್ಣನ್ನು ತೆಗೆದುಕೊಂಡು ತಿಂದಿದ್ದ, ಆದರೆ ಆಗ ಅವನಲ್ಲಿ ಅದಕ್ಕೆ ಕೊಡುವಷ್ಟು ಹಣವಿಲ್ಲದ್ದರಿಂದ ನಂತರ ಕೊಡುತ್ತೇನೆಂದು ಹೇಳಿದ್ದ. ಅದು ಉಳಿದು ಹೋಗಿತ್ತು. ಮುಂದೆ ಪ್ರಾನ್ಸ್ ದೇಶದ ದೊರೆಯಾದಾಗ ಆ ಹಣ್ಣು ಮಾರುವ ಅಂಗಡಿಗೆ ಸ್ವತಃ ಹೋಗಿ ಸಾಕಷ್ಟು ಹಣವನ್ನು ಕೊಟ್ಟು ಧನ್ಯವಾದ ಹೇಳಿದಾಗ, ಆ ಹಣ್ಣು ಮಾರುವ ಅಜ್ಜಿಗೆ ತನ್ನ ಕಣ್ಣನ್ನೇ ತಾನು ನಂಬದಾದಳು. ದೇಶದ ದೊರೆಯ ಪ್ರಾಮಾಣಿಕತೆ ಸರಳತೆ ಸೌಜನ್ಯತೆ ಕಂಡು ಅವಳು ಮೂಕ ವಿಸ್ಮಿತಳಾದಳು. ಅವಳ ಕಂಗಳಿಂದ ಆನಂದ ಭಾಷ್ಪ ಧಾರೆ ಇಟ್ಟಿತು. ಅವಳಲ್ಲಿ ಜೀವಮಾನದ ಧನ್ಯತೆಭಾವ ಮೂಡಿತು! ಇಂಥ ಆದರ್ಶ ಪುರುಷನ ಜೀವನಗಂಗೆಯು ಎಂದೆಂದಿಗೂ ಆದರ್ಶ, ಅನುಕರಣೀಯ!

ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳವರ ಪ್ರವಚನಗಳು

ವಂದನೆಗಳೊಂದಿಗೆ

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World