www.dgnsgreenworld.blogspot.com

Wednesday, April 27, 2022

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ!

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ! 

ಈ ವರ್ಷ ಮತ್ತೆ ಅಕ್ಷಯ ತೃತೀಯ ಬರುತ್ತಿದೆ (May 3). ಆಗಲೇ ಬಂಗಾರದ ಅಂಗಡಿಗಳು ಭಾರಿ ಆಫರ್ ಗಳನ್ನು ಕೊಡಲು ಆರಂಭಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಟಿವಿಗಳಲ್ಲಿ ಬ್ರಹ್ಮಾಂಡ ಬೃಹಸ್ಪತಿಗಳು ಬಂದು ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಹೇಗೆ ಬರುತ್ತಾಳೆ ಅಂತ ಪುಂಖಾನುಪುಂಖವಾಗಿ ಪುಗುತ್ತಾರೆ. ನೆನಪಿಡಿ ಈ ಕಾರ್ಯಕ್ರಮಗಳನ್ನು ಸ್ಪಾನ್ಸರ್ ಮಾಡುವುದು ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳೇ!ಗೋಲ್ಡ್ ಶೋರೂಮ್ ಗಳಂತೂ ಭರ್ಜರಿ ಆಫರ್ ಜೊತೆಗೆ ಅದೃಷ್ಟ ಲಕ್ಷ್ಮಿಯನ್ನು ನಿಮ್ಮ ಮನೆಗೆ ಇವರೇ ಖುದ್ದು ಕಳಿಸಿಕೊಡುವವರಂತೆ ವರ್ತಿಸುತ್ತಾರೆ. 

ಒಂದು ಚೂರು ಯೋಚನೆ ಮಾಡಿ ನೋಡಿ...ಒಂದು ಹದಿನೈದು ಇಪ್ಪತ್ತು ವರ್ಷ ಹಿಂದಕ್ಕೆ ಹೋಗಿ. ಆಗ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳು ಇರಲಿಲ್ಲ, ಖಾಸಗಿ ಟಿವಿ ಚಾನಲ್ ಗಳು ದೊಡ್ಡದಾಗಿರಲಿಲ್ಲ...ಬ್ರಹ್ಮಾಂಡ ಬೃಹಸ್ಪತಿಗಳು ಟಿವಿಗಳಲ್ಲಿ ಕಾಣುತ್ತಿರಲಿಲ್ಲ.ಜನರು ಮುಗಿದು ಬಿದ್ದು ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿ ಕೂಡ ಮಾಡುತ್ತಿರಲಿಲ್ಲ.ಈಗಂತೂ ವಾರಕ್ಕೆ ಮೊದಲೇ ಪ್ರತಿವರ್ಷ
ಅಕ್ಷಯ ತೃತೀಯ ಕಾರ್ಯಕ್ರಮಗಳು ಪ್ರಸಾರ ಶುರುವಾಗುತ್ತದೆ. ಅಕ್ಷಯ ತೃತೀಯ ಸ್ಪೆಷಲ್ ಕಾರ್ಯಕ್ರಮಗಳ ಹಿಂದೆ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳ ಕೈವಾಡ ಇರುತ್ತದೆ. ಜ್ಯೋತಿಷ್ಯಗಳ ಮೂಲಕ ಇದೇ ದಿನ ಬಂಗಾರ ಖರೀದಿ ಮಾಡಬೇಕು. ಈ ದಿನ ಬಂಗಾರ ಖರೀದಿ ಮಾಡುವುದರಿಂದ ಅಕ್ಷಯ ಅಂದರೆ ವೃದ್ಧಿಸುತ್ತದೆ ಎಂಬ ಭಾವನೆಯನ್ನು ಬಿತ್ತುತ್ತಿದ್ದಾರೆ.
ತಿಂಗಳಿಗೆ ಮೊದಲೇ ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿಗೆ ಮುಂಗಡ ಬುಕಿಂಗ್ ಗೋಲ್ಡ್ ಶೋರೂಮ್ ಗಳು ಆರಂಭಿಸುತ್ತವೆ. ಬೃಹಸ್ಪತಿ ಗಳ ಮಾತನ್ನು ನಂಬಿಕೊಂಡು
ಅದೆಷ್ಟೋ ಮಧ್ಯಮವರ್ಗದವರು ಸಾಲಸೋಲ ಮಾಡಿ ಇದೇ ದಿನ ಬಂಗಾರ ಖರೀದಿಗೆ ಮುಗಿದು ಬೀಳುತ್ತಿದ್ದಾರೆ. 

ಇಷ್ಟಕ್ಕೂ ಅಕ್ಷಯ ತೃತೀಯ ಎಂದರೇನು?

ವೈಶಾಖ ಮಾಸದ ಶುಕ್ಲಪಕ್ಷದ ಮೂರನೆಯ ದಿನವನ್ನು ಅಕ್ಷಯ ತೃತೀಯ ಅಂತ ಕರೆಯುತ್ತಾರೆ. 'ಅಕ್ಷಯ' ಎಂದರೆ ಸದಾ ವೃದ್ಧಿಯಾಗುವುದು, ಎಂದಿಗೂ ಕೂಡ ಕರಗದೆ ಇರುವ ಸಂಪತ್ತು ಎಂಬ ಅರ್ಥ ಕೊಡುತ್ತದೆ. ಅಕ್ಷಯ ತೃತೀಯ ಎಂದರೆ ದಾನ ಮಾಡುವ ದಿನ. ಹೌದು ನಮ್ಮ ಬಳಿಯಲ್ಲಿ ಇರುವಂತಹ ಧವಸ-ಧಾನ್ಯಗಳು ಜೊತೆಗೆ ಬಡವರಿಗೆ ಬಟ್ಟೆಗಳನ್ನುದಾನ ಮಾಡುವ ಮೂಲಕ ಪುಣ್ಯವನ್ನು ಅಕ್ಷಯ ಮಾಡಿಕೊಳ್ಳುವ ದಿನ.

ಅಕ್ಷಯ ತೃತೀಯ ದಿನ ಮಾಡಬೇಕಾದದು ಬರೀ ದಾನ... ದಾನ...ದಾನ...ಈ ದಿನ ತನ್ನಲ್ಲಿರುವ  ಸಂಪತ್ತನ್ನು  ಬಡವರಿಗೆ -ಅಸಹಾಯಕರಿಗೆ ದಾನ ಮಾಡುವುದರಿಂದ ಪುಣ್ಯ ದಕ್ಕಿ ಅದರಿಂದ ದಾನ ಮಾಡಿದವರ ಬದುಕಿನಲ್ಲಿ,
ಕುಟುಂಬಗಳಲ್ಲಿ ಸಂತೋಷ ನೆಮ್ಮದಿ ಶಾಂತಿ ಮತ್ತು ಆರೋಗ್ಯಗಳು ಅಕ್ಷಯವಾಗಲಿ ಎಂಬ ಸದುದ್ದೇಶ 'ಅಕ್ಷಯ ತೃತೀಯ' ದಿನದ ಆಚರಣೆಯ ಹಿನ್ನೆಲೆಯಲ್ಲಿ ಇರುವಂತಹದು. ಅಕ್ಷಯ ತೃತೀಯ ದಿನ ನೀವು ಬಡಬಗ್ಗರು, ನಿರ್ಗತಿಕರಿಗೆ ಅಸಹಾಯಕರಿಗೆ ಏನನ್ನು ದಾನ ರೂಪದಲ್ಲಿ (ಅನ್ನ-ನೀರು, ದವಸ-ಧಾನ್ಯ, ಹಣ ಹೀಗೆ) ನೀವು ಏನನ್ನು ನೀಡಿದರೂ ಅದು ನಿಮಗೆ ಮತ್ತೆ ಅಕ್ಷಯವಾಗಲಿ ಎಂಬ ಹಾರೈಕೆಯ ಹಿನ್ನೆಲೆ ಅಕ್ಷಯ ತೃತೀಯ ಆಚರಣೆ.

ಅಕ್ಷಯ ತೃತೀಯ ದಿನ ಮುಖ್ಯವಾಗಿ ಮೂರು ದಾನಗಳನ್ನು ಮಾಡುತ್ತಿದ್ದರು.

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಆಚರಣೆಗೂ ಒಂದು ವೈಜ್ಞಾನಿಕ ಕಾರಣಗಳಿವೆ. ಆಚರಣೆಗಳ ಒಳಗೆ ಮಡಿ-ಮೈಲಿಗೆ-ಕಂದಾಚಾರಗಳು ಪ್ರವೇಶಮಾಡಿ ಅರ್ಥಗಳು  ಕಳೆದುಹೋಗಿ ಅನರ್ಥಗಳು ಮಾತ್ರ ಉಳಿದು ಹೋಗಿವೆ. ಇದರಿಂದ ಅಕ್ಷಯತೃತಿಯ ಕೂಡ ಹೊರತಾಗಿಲ್ಲ. 

ಅಕ್ಷಯ ತೃತೀಯ ವೈಶಾಖ ಮಾಸದಲ್ಲಿ ಬರುತ್ತದೆ ಅಂದರೆ ಸುಡುಬಿಸಿಲಿನ ಕಾಲ. ಹೀಗಾಗಿ ದಾನದ ರೂಪದಲ್ಲಿ ಬಡವರಿಗೆ ಮತ್ತು ಅಸಹಾಯಕ ನಿರ್ಗತಿಕರಿಗೆ ನೀರಿನ (ಮಣ್ಣಿನ) ಮಡಿಕೆ ಈ ದಿನ ದಾನದ ರೂಪದಲ್ಲಿ ನೀಡುತ್ತಿದ್ದರು. ಜೊತೆಗೆ ಮತ್ತೊಂದು ವಿಶಿಷ್ಟವಾದದ್ದು ಅಂದರೆ ಸುವಾಸನಾಭರಿತವಾದ ನೀರಿನ ದಾನ. ಹೌದು ಹೇಗೆ ನಾವು ಈಗ ರಾಮನವಮಿಗೆ  ಪಾನಕ -ಹೆಸರುಬೇಳೆ ಕೊಡುತ್ತೇವೆ ಹಾಗೆ ಹಿಂದಿನ ಕಾಲದಲ್ಲಿ ಅಕ್ಷಯತೃತಿಯ ದಿನ ಬಿಸಿಲಿಗೆ ಬಳಲಿ ಬೆಂಡಾಗಿದ್ದ ಸಾಮಾನ್ಯರಿಗೆ ರಸ್ತೆ ಬದಿಯಲ್ಲಿ ನಿಂತು ಸುವಾಸನಾಭರಿತವಾದ ನೀರನ್ನು ನೀಡುತ್ತಿದ್ದರು. (ನೀರನ್ನು ದಾನದ ರೂಪದಲ್ಲಿ ನೀಡುವುದಕ್ಕೆ ಬಹುಮುಖ್ಯ ಕಾರಣವೆಂದರೆ ಮನುಷ್ಯನಿಗೆ ಆಹಾರವಿಲ್ಲದೆ ಹೋದರೂ ಪರವಾಗಿಲ್ಲ ಆದರೆ ನೀರು ಇದ್ದರೆ ಮಾತ್ರ ಜೀವ. ಸತ್ತು ಸ್ವರ್ಗದ ದಾರಿಯಲ್ಲಿ ನಡೆಯಬೇಕಾದ ಕೂಡ ಮುಂದೆ ನೀರಿನ ಹಾಹಾಕಾರ ಬರೆದೆ ಇರಲಿ ಎಂದು ನೀರನ್ನು ದಾನದ ರೂಪದಲ್ಲಿ ಕೊಡುತ್ತಿದ್ದರು)

ಅಷ್ಟಕ್ಕೂ ಸುವಾಸನಾಭರಿತವಾದ ನೀರು ಹೇಗೆ ತಯಾರು ಮಾಡುತ್ತಿದ್ದರು ಗೊತ್ತೇ?

ಅಕ್ಷಯ ತೃತೀಯ ಹಿಂದಿನ ದಿನ ಮಾರುಕಟ್ಟೆಯಿಂದ ಹೊಸದಾದ ನೀರಿನ ಮಡಿಕೆಯನ್ನು ತೆಗೆದುಕೊಂಡು ಬಂದು ಅದನ್ನು ಶುದ್ಧವಾಗಿ ತೊಳೆದು ಅದರ ತುಂಬಾ ಕುಡಿಯುವ ನೀರನ್ನು ಹಾಕಿ, ಒಂದೆರಡು ಲವಂಗ- ಏಲಕ್ಕಿ- ಜಾಜಿಕಾಯಿ- ಜಾಪತ್ರೆ-ಪಚ್ಚ (ಹಸಿ)ಕರ್ಪೂರಮತ್ತು ಕಸ್ತೂರಿ ಇದನ್ನೆಲ್ಲವನ್ನು ಒಟ್ಟಿಗೆ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಂಡು ಮಡಿಕೆ ಒಳಗಿನ ಕುಡಿಯುವ ನೀರಿನ ಒಳಗೆ ಹಾಕುತ್ತಾರೆ. ಅದನ್ನು ಮುಚ್ಚಳದಿಂದ ಚೆನ್ನಾಗಿ ಮುಚ್ಚಿಡುತ್ತಾರೆ. ಬೆಳಗ್ಗೆ ಮುಚ್ಚಳವನ್ನು ತೆರೆದಾಗ ಕುಡಿಯುವ ನೀರು ಸುವಾಸನಾಭರಿತವಾಗಿರುತ್ತದೆ ಮತ್ತು ಅದು ಶಕ್ತಿಯುತ ಮತ್ತು ಆರೋಗ್ಯವಂತವಾದ ಪಾನೀಯವಾಗುತ್ತದೆ. ಈ ಸುವಾಸನಾಭರಿತ ವಾದ ನೀರನ್ನು ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತು ಸುಡುಬಿಸಿಲಿನಲ್ಲಿ ನಡೆದು ಹೋಗುತ್ತಿರುವ ದಾರಿಹೋಕರಿಗೆ ನೀಡುವ ಮೂಲಕ ಅವರ ಸಂತೋಷಪಡಿಸಿ ತಾವು ಸಂತೃಪ್ತರಾಗಿದ್ದರು.

ಇನ್ನು ಇದೇ ಸಮಯದಲ್ಲಿ ಇನ್ನು ಎರಡು ಮುಖ್ಯ ದಾನಗಳನ್ನು ಕೂಡ ಮಾಡುತ್ತಿದ್ದರು. ಒಂದು ಬಿಸಿಲಿನ ಕಾರಣಕ್ಕಾಗಿ ಪಾದರಕ್ಷೆಗಳು ಇನ್ನೊಂದು ಕೊಡೆಯನ್ನು ಕೂಡ ದಾನದ ರೂಪದಲ್ಲಿ ನೀಡುತ್ತಿದ್ದರು. ಬಡವರು-ನಿರ್ಗತಿಕರಿಗೆ ದಾನದ ರೂಪದಲ್ಲಿ ಇದೆಲ್ಲವನ್ನೂ ನೀಡುವುದರಿಂದ ತಮ್ಮ ಜೀವನದಲ್ಲಿ ಪುಣ್ಯ -ಸಂತೋಷ- ನೆಮ್ಮದಿಗಳು ಅಕ್ಷಯವಾಗುತ್ತದೆ ಎಂಬ ನಂಬಿಕೆ ಅಂದಿನ ಜನರಲ್ಲಿತ್ತು.
ಅಕ್ಷಯ ತೃತೀಯ ಅರ್ಥವೇ ದಾನ...

ಬಂಗಾರ ಖರೀದಿ ಮಾಡಿದರೆ ದರಿದ್ರವನ್ನು ಮನೆಗೆ ತೆಗೆದುಕೊಂಡು ಹೋದಂತೆ!

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಯಾವ ಶಾಸ್ತ್ರದಲ್ಲೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ನೆನಪಿಡಬೇಕಾದ ವಿಷಯವೆಂದರೆ ಇದು ಕಲಿಯುಗ, ಕಲಿಪುರುಷ ಇನ್ನಿಲ್ಲದಂತೆ ಜನರನ್ನು ಹಿಂಸಿಸುತ್ತಾನೆ ಮತ್ತು ಕಾಡುತ್ತಾನೆ. ಕಲಿಪುರುಷನ ವಾಸಸ್ಥಾನದಲ್ಲಿ ಮೊದಲನೆಯದು ಬಂಗಾರ. ಹೀಗಾಗಿ ನಿಮ್ಮ ಮನೆಯಲ್ಲಿ ಎಷ್ಟು ಬಂಗಾರವಿರುತ್ತದೆ ಅಷ್ಟು ಅಶಾಂತಿ ಮನೆಮಾಡಿರುತ್ತದೆ. ಮನೆಗೆ ಕನ್ನ ಹಾಕುವ ಕಳ್ಳರು ಕೂಡ ಮೊದಲು ದೋಚುವುದು ಕೂಡ ದರಿದ್ರ ಬಂಗಾರವನ್ನೆ. ಅಂತಹ ಬಂಗಾರವನ್ನು ನೀವು ಅಕ್ಷಯ ತೃತೀಯ ದಿನ ಖರೀದಿ ಮಾಡಿದರೆ ಕಲಿಪುರುಷನ ಪ್ರವೇಶ ನಿಮ್ಮ ಮನೆಗೆ ಆಗುತ್ತದೆ. ಮನೆಯಲ್ಲಿ ಅಶಾಂತಿ, ನಿತ್ಯ ಗಲಾಟೆಗಳು,ರಂಪಾಟಗಳು ಅಕ್ಷಯವಾಗುತ್ತದೆ. 

ನಿಮ್ಮ ಬಳಿ ಹಣವಿದ್ದಾಗ ಬಂಗಾರವನ್ನು ಖರೀದಿ ಮಾಡಿ ಆದರೆ ಯಾವನೋ ಟಿವಿಯಲ್ಲಿ ಬೃಹಸ್ಪತಿ ಹೇಳಿದ ಅಂತ ಹೇಳಿ ಅಪ್ಪಿತಪ್ಪಿ ಕೂಡ ಅಕ್ಷಯ ತೃತೀಯ ದಿನ ಸಾಲ ಮಾಡಿ ಬಂಗಾರದ  ಖರೀದಿ ಮಾಡಿ ಸಂಕಷ್ಟಗಳಿಗೆ ಸಿಲುಕಬೇಡಿ. ಅಕ್ಷಯ ತೃತೀಯ ದಿನ ನೀವು ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋದರೆ ಮುಂದಿನ ಅಕ್ಷಯತೃತೀಯ ದಿನದವರೆಗೂ ನಿಮ್ಮ ಮನೆಯಲ್ಲಿ ಕಲಿ ಪುರುಷ ಸ್ಥಿರನಾಗುತ್ತಾನೆ.ಅಶಾಂತಿಯ ಗೂಡು ನಿಮ್ಮ ಮನೆಯಾಗುತ್ತದೆ, ನೆಮ್ಮದಿಯ ನಿದ್ದೆ ಹೋಗುತ್ತದೆ, ಅಪಮಾನಗಳು ಎದುರಾಗುತ್ತದೆ...ಹೀಗಾಗಿ ಆಯ್ಕೆ ನಿಮ್ಮದು!

ಅಕ್ಷಯ ತೃತೀಯ ದಿನದಂದು ಸಾಧ್ಯವಾದರೆ ಯಾವುದಾದರೂ ಒಂದು ಅನಾಥಾಶ್ರಮದ ಮಕ್ಕಳಿಗೆ  ಊಟ ಹಾಕಿಸಿ, ಪರಿಸರ ಸಂರಕ್ಷಿಸಲು ಒಂದು ಗಿಡ ನೆಡಿ. ಸಾಧ್ಯವಾದಷ್ಟು ಒಳ್ಳೆಯ ವಿಷಯಗಳನ್ನು ಒಳ್ಳೆಯತರದಲ್ಲಿ  ಬದುಕಿನ ಆಲೋಚನೆಗಳನ್ನು ಮಾಡಿ ಇದರಿಂದ ಬದುಕು ಅಕ್ಷಯವಾಗುತ್ತದೆ.
💐💐💐💐💐💐💐💐💐
 ಚಿನ್ನವೇ ಬದುಕಲ್ಲ
ಬದುಕೇ   ಚಿನ್ನ. 
🌹🌹🌹🌹🌹🌹🌹🌹🌹

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World