www.dgnsgreenworld.blogspot.com

Tuesday, October 6, 2020

ಸಿರಿಧಾನ್ಯಗಳು V/S ಅಕ್ಕಿ, ರಾಗಿ, ಗೋಧಿ, ಜೋಳ, ಹಾಗೂ ಕಾರ್ಪೋರೇಟ್ ಕಂಪನಿಗಳ ಷಢ್ಯಂತ್ರ.!!!

ಸಿರಿಧಾನ್ಯಗಳು V/S ಅಕ್ಕಿ, ರಾಗಿ, ಗೋಧಿ, ಜೋಳ, ಹಾಗೂ ಕಾರ್ಪೋರೇಟ್  ಕಂಪನಿಗಳ ಷಢ್ಯಂತ್ರ.!!!
ಈ ಮೇಲಿನ ವಿಚಾರ ಅತಿ ಹೆಚ್ಚು ಚರ್ಚಿತವಾದ ಹಾಗೂ ಕಡಿಮೆ ಅರ್ಥವಾದ ವಿಚಾರ. ಈ ಬಗ್ಗೆ ನನ್ನದೊಂದು ವೈಯಕ್ತಿಕ ವಿಶ್ಲೇಷಣೆ, ನಾನು ಇಲ್ಲಿ ಯಾರ ನಂಬಿಕೆಗಳನ್ನೂ ಬುಡಮೇಲು ಮಾಡಲು ಹೊರಟಿಲ್ಲ ಹಾಗಾಗಿ, ಆರೋಗ್ಯಕರ ಚರ್ಚೆಗೆ ನನ್ನ ಸಹಮತವಿದೆ, ಯಾವುದೋ ಪೂರ್ವಾಗ್ರಹ ಇಟ್ಟುಕೊಂಡು ವಾದಕ್ಕೆ ಇಳಿದರೆ, ನಾನು ಭಾಗವಹಿಸಲಾರೆ. ಎಂದಿನಂತೆ ಎಲ್ಲ ಸಹೃದಯರಿಗೂ ನನ್ನ ಲೇಖನಕ್ಕೆ ಸ್ವಾಗತ, ಓದಿ, ಹಂಚಿ, ಹರಸಿ, ಹಾರೈಸಿ.
ಮೊದಲಿಗೆ ಇಲ್ಲಿ ನನ್ನದೊಂದು ಪ್ರಶ್ನೆ ಇದೆ, ಸಿರಿಧಾನ್ಯಗಳನ್ನು ಬಳಸಿ ಎಂದು ಉದ್ದುದ್ದ ಭಾಷಣ ಮಾಡುವ ಕೆಲವರು ಸಿರಿಧಾನ್ಯಗಳೇ ಆದ ರಾಗಿ, ಗೋಧಿ, ಜೋಳಗಳನ್ನು ಸಿರಿಧಾನ್ಯಗಳ ಪಟ್ಟಿಗೆ ಯಾಕೆ ಸೇರಿಸಲ್ಲ..? ನನಗಂತೂ ತಿಳೀತಿಲ್ಲ. ಅಸಲಿಗೆ, ಅಕ್ಕಿಗೂ ಸಿರಿಧಾನ್ಯಕ್ಕೂ ಇರುವ ವ್ಯತ್ಯಾಸಗಳೇನು..? ಮೂಲತಃ ಭತ್ತವು ಸಮೃದ್ಧ ನೀರಾವರಿ ಹೊಂದಿರುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ, ಸಿರಿಧಾನ್ಯಗಳಿಗೆ ನೀರಾವರಿಯ ಅಗತ್ಯವಿಲ್ಲ ಕಠಿಣ ನೆಲಗಳಲ್ಲೂ ಬೆಳೆಯಬಹುದಾದ ಬೆಳೆಗಳಾಗಿವೆ. ಅಕ್ಕಿ, ರಾಗಿ, ಗೋಧಿ, ಜೋಳಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ, ನಾರಿನಂಶ, ಪೋಷಕಾಂಶಗಳು, ಖನಿಜಾಂಶಗಳು ಹೆಚ್ಚಿರುತ್ತವೆ, ಇದರ ಅರ್ಥ ಅಕ್ಕಿ, ರಾಗಿ, ಗೋಧಿ, ಜೋಳಗಳಲ್ಲಿ ಪೋಷಕಾಂಶಗಳು ಇಲ್ಲವೇ ಇಲ್ಲ ಎಂದು ಅಲ್ಲ. ಇನ್ನು ಕಾರ್ಬೋಹೈಡ್ರೇಟ್ ಗಳು, ಸಿರಿಧಾನ್ಯಗಳಿಗೆ ಹೋಲಿಸಿದರೆ, ಅಕ್ಕಿ, ರಾಗಿ, ಗೋಧಿ, ಜೋಳಗಳಲ್ಲಿ ಹೆಚ್ಚು. ಇಲ್ಲಿದೆ ನೋಡಿ ಒಂದು ವೀಕ್ ಪಾಯಿಂಟ್. ಇದೊಂದೆ ಕಾರಣವನ್ನು ಇಟ್ಟುಕೊಂಡು ಕೆಲವರು ಸಿರಿಧಾನ್ಯಗಳನ್ನು ತಿನ್ನದಿದ್ದರೆ ನಿಮಗೆ, ಸಕ್ಕರೆ ಖಾಯಿಲೆ ಬಂದು ಬಿಡುತ್ತದೆ, Cholesterol, ಬಂದು ಬಿಡುತ್ತದೆ. ಹಾಗೇ ಹೀಗೇ. ಕೆಲವರಿಗೆ ಗೊತ್ತಿರದ ವಿಚಾರ ಏನಂದ್ರೆ ನಾವು ಯಾವುದೇ ಆಹಾರ ತಿಂದು ನಿಯಮಿತ ದೈಹಿಕ ವ್ಯಾಯಾಮ ಮಾಡದೇ ಇದ್ದರೆ ಈ ಮೇಲಿನ ಎಲ್ಲ ಖಾಯಿಲೆಗಳು ಬಂದೇ ಬರುತ್ತವೆ. ಸಕ್ಕರೆ ಖಾಯಿಲೆ ಎಂದರೇನು. ನಾವು ತಿಂದ ಆಹಾರದಲ್ಲಿನ ಕಾರ್ಬೊಹೈಡ್ರೇಟ್ಸ್, ಗ್ಲೂಕೋಸ್ ಆಗಿ, ಆ ಗ್ಲೂಕೋಸ್  ಪರಿವರ್ತನೆಯಾಗಿ, ಕೆಲಸ ಮಾಡಲು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಹಾಗೂ ಕರಗಿ ಹೋಗುತ್ತದೆ. ಯಾವಾಗ ನಾವು ತಿಂದುಂಡು ಸರಿಯಾದ ದೈಹಿಕ ಶ್ರಮ ಮಾಡುವುದಿಲ್ಲವೋ.. ಆಗ ಗ್ಲೂಕೋಸ್ ಗೆ ಶಕ್ತಿಯಾಗಿ ಪರಿವರ್ತನೆಯಾಗುವ ಅಗತ್ಯವೇ ಬರೋದಿಲ್ಲ. ಆಗ ಆ ಗ್ಲೂಕೋಸ್ ದೇಹದಲ್ಲೇ ಶೇಕರಿಸಲ್ಪಡುತ್ತದೆ. ಇದೇ ಸಕ್ಕರೆ ಖಾಯಿಲೆ.
ಸಿರಿಧಾನ್ಯಗಳನ್ನು ತಿಂದರೆ ಆರೋಗ್ಯವಾಗಿರ್ತೇವೆ ಎನ್ನುವುದು, ದೈಹಿಕ ಶ್ರಮ ಪಡದೆ ಆರೋಗ್ಯವಾಗಿರಬೇಕು ಎಂದುಕೊಳ್ಳುವ ಹಲವರ ಭ್ರಮೆ ಹಾಗೂ ಕಾರ್ಪೋರೇಟ್ ಕಂಪನಿಗಳು ಪ್ರಯೋಗಿಸುತ್ತಿರುವ ಮಾರ್ಕೆಟಿಂಗ್ ದಾಳವಷ್ಟೇ..
ನಾನು ಎಲ್ಲೋ ಓದಿದ ನೆನಪು, ಹಿಂದೆ ವಾಷಿಂಗ್ ಟನ್ ನಲ್ಲಿ, ಅತಿ ಹೆಚ್ಚು ಸೇಬು ಬೆಳೆಯುತ್ತಿದ್ದ ಕಾರಣ, ಅಷ್ಟೂ ಸೇಬುಗಳು ವ್ಯಾಪಾರವಾಗದೆ, ಬೆಳೆಗಾರರು ನಷ್ಟ ಅನುಭವಿಸುತ್ತಿದ್ದರಂತೆ. ಅವರಿಗೆ ಒಬ್ಬ ಮನೆಹಾಳ, ಒಂದು ಉಪಾಯ ಸೂಚಿಸಿದನಂತೆ. ಆ ಮನೆಹಾಳು ಉಪಾಯದಿಂದ ಹುಟ್ಟಿಕೊಂಡ ಮಾತೇ “An Apple a day keeps the Doctor away”. ಇಂದು ಇಂಥವೇ ಕಪೋಲ ಕಲ್ಪಿತ ಕಥೆಗಳು ಸಿರಿಧಾನ್ಯಗಳ ಕುರಿತು ಬರುತ್ತಿರುವುದು ವಿಪರ್ಯಾಸ.
ನಾನು ಕಂಡ ನನ್ನ ಹಿಂದಿನ ತಲೆಮಾರು ಯಾವ ಸಿರಿಧಾನ್ಯವನ್ನು ಬಳಸಲೇ ಇಲ್ಲ, ಆದರೂ ಆರೋಗ್ಯವಂತರಾಗಿ, ರೋಗರಹಿತರಾಗಿ, ಸಂಪೂರ್ಣ ಆಯುಷ್ಯ ಮುಗಿಸೇ ಸತ್ತದ್ದು. ಹೀಗೆ ವಿಶ್ಲೇಷಣೆ ಮಾಡುತ್ತಾ ಹೋದಾಗ ನನಗೆ ಮತ್ತೊಂದು ಐತಿಹಾಸಿಕ ದಾಖಲೆ ಸಿಕ್ಕಿತು. ಅದೇ ದಾಸ ಶ್ರೇಷ್ಠ ಕನಕದಾಸರ ಕೃತಿ “ರಾಮಧಾನ್ಯ ಚರಿತೆ” ಈ ಕೃತಿಯ ಸಾರಾಂಶ ಬಹಳ ಮಂದಿಗೆ ಗೊತ್ತಿರಬಹುದು, ಮೂಲತಃ ಇದೊಂದು ಮೇಲು ಕೀಳು ಎಂಬ ಅಂದಿನ ಸಮಾಜಿಕ ವ್ಯವಸ್ಥೆಯನ್ನು ಠೀಕಿಸುವ, ಠೀಕಾಗ್ರಂಥ. ಇಲ್ಲಿ ಕೆಳವರ್ಗವನ್ನು ರಾಗಿಗೆ ಹೋಲಿಸಿ, ಮೇಲ್ವರ್ಗವನ್ನು ಅಕ್ಕಿಗೆ ಹೋಲಿಸಿ, ಕೊನೆಗೆ ಇವೆರಡರಲ್ಲಿ ಯಾವುದು ಬಲಶಾಲಿ ಎಂಬ ಪಂದ್ಯ ಏರ್ಪಟ್ಟಾಗ, ಇಬ್ಬರನ್ನೂ ಸೆರೆಮನೆಯಲ್ಲಿಟ್ಟು, ಕೆಲ ದಿನಗಳ ನಂತರವೂ ಗಟ್ಟಿಮುಟ್ಟಾಗಿಯೇ ಇದ್ದ ರಾಗಿಯೇ ಶ್ರೇಷ್ಠ, ಸೊರಗಿ ಹೋಗಿದ್ದ ಅಕ್ಕಿಯು ರಾಗಿಗಿಂತ ಕನಿಷ್ಠ ಎಂದು ಶ್ರೀ ರಾಮಚಂದ್ರ ತೀರ್ಪನ್ನು ನೀಡುತ್ತಾನೆ. ಆದರೆ ವಿಚಾರ ಇದಲ್ಲ, 16 ನೇ ಶತಮಾನದಲ್ಲಿ ಅಂದರೆ ಸುಮಾರು 500 ವರ್ಷಗಳ ಹಿಂದೆ, ರಚಿತವಾದ ಈ ಕೃತಿಯಲ್ಲಿ, ಅಕ್ಕಿ ಹಾಗೂ ರಾಗಿಗಳ ಉಲ್ಲೇಖವಿದೆ. ಇದರ ಅರ್ಥ ಅಂದೂ ಕೂಡ, ಅಕ್ಕಿ ರಾಗಿಗಳೇ, ಪ್ರಮುಖ ಆಹಾರ ಧಾನ್ಯಗಳಾಗಿದ್ದವು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೆ..? ಕನಕದಾಸರು ಯಾಕೆ ಆರ್ಕಾ, ಊದಲು, ಸಾಮೆ, ನವಣೆ, ಇತ್ಯಾದಿಗಳನ್ನ ಉದಾಹರಣೆಗೆ ತೆಗೆದುಕೊಳ್ಳಲಿಲ್ಲ..? ಇದಕ್ಕೂ ಕಾರಣವಿದೆ, ಅತಿ ಹೆಚ್ಚು ಬಳಕೆಯಲ್ಲಿರುವುದರ ಮೂಲಕ ವಿಚಾರ ತಿಳಿಸಿದರೆ, ಎಲ್ಲರಿಗೂ ತಲುಪುತ್ತದೆ ಅನ್ನುವ ಕಾರಣ ಇರಬಹುದಲ್ವೇ..? ಇನ್ನು ಪುರಂದರ ದಾಸರ ಕೀರ್ತನೆಗಳಲ್ಲೊಂದಾದ, “ರಾಗಿ ತಂದೀರಾ ಭಿಕ್ಷಕೆ” ಕೀರ್ತನೆಯನ್ನು ಕೇಳದೇ ಇರೋರು ಬಹಳ ವಿರಳ. ಹೀಗೇ ಜಾನಪದ ಸಾಹಿತ್ಯಗಳಲ್ಲೂ, ನೆಲ್ಲು(ಭತ್ತ), ರಾಗಿಗಳು ರಾರಾಜಿಸಿವೆ.
ತಮಾಷೆಯೆಂದರೆ ನಮಗೆ ಉತ್ತರ ಕರ್ನಾಟಕ ಎಂದರೆ ಜೋಳದ ರೊಟ್ಟಿ ನೆನಪಿಗೆ ಬರುತ್ತದೆ. ಆದರೆ ಕನಕದಾಸರು, ಹಾಗೂ ಪುರಂದರ ದಾಸರು. ಮೂಲತಃ ಉತ್ತರ ಕರ್ನಾಟಕದವರೇ ಆದರೂ ರಾಗಿಯನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಇದರ ಅರ್ಥ ಅಂದಿನ ಕಾಲಕ್ಕೆ ರಾಗಿ ಎಂಬ ಧಾನ್ಯ ಇಡೀ ಕರ್ನಾಟಕವನ್ನೇ ಆವರಿಸಿತ್ತು ಅಲ್ವೇ..?
ನಾನು ಕಂಡಂತೆಯೇ ಸುಮಾರು ಮಂದಿ ಸಿರಿವಂತರು ರಾಗಿಯನ್ನೇ ಸೇವಿಸುತ್ತಿರಲಿಲ್ಲ, ರಾಗಿ ಬಡವರ ಆಹಾರ ಎಂಬ ತಪ್ಪು ಕಲ್ಪನೆ ಇತ್ತು. ಆದರೆ ಯಾವಾಗ ಈ ಸಕ್ಕರೆ ಖಾಯಿಲೆ ಮನೆಮನೆಗೂ ಲಗ್ಗೆ ಇಟ್ಟಿತೋ.. ವೈದ್ಯರು ರಾಗಿಯನ್ನು ಸೂಚಿಸಲು ಶುರು ಮಾಡಿದರು ಆನಂತರ ಕೆಲ ದಿನಗಳಲ್ಲಿ ರಾಗಿಗೆ ಬಹಳವೇ ಬೆಲೆ ಬಂತು ಹಾಗೂ ನಗರಗಳಲ್ಲಿ ರಾಗಿ ತಿಂತಿದಾನೆ ಅಂದ್ರೆ ಅವನಿಗೇನೋ ಖಾಯಿಲೆ ಅನ್ನೋ ರೀತಿ ಮಾತಾಡೋಕೆ ಶುರುವಿಟ್ಟುಕೊಂಡಿದ್ದರು. ಈಗ ರಾಗಿಯನ್ನೂ ಹಿಂದಿಕ್ಕಿ ಸಿರಿಧಾನ್ಯಗಳು ಮುಂದೆ ಬರಲು ಹವಣಿಸುತ್ತಿವೆ.
ಕಾರ್ಬೋಹೈಡ್ರೇಟ್ಸ್ ಗಾಗಿ, ಅಕ್ಕಿ, ರಾಗಿ, ಗೋಧಿ, ಜೋಳ, ಸೇವಿಸಬಹುದು. ನಮ್ಮ ದೇಹಕ್ಕೆ ಅಗತ್ಯವಾದ, ನಾರಿನಂಶಗಳು, ಪೋಷಕಾಂಶಗಳು, ಖನಿಜಾಂಶಗಳು, ಸೊಪ್ಪು ತರಕಾರಿಗಳಲ್ಲಿ, ಮೊಳಕೆಕಾಳುಗಳಲ್ಲಿ ಹಾಗೂ ಆಯಾ ಕಾಲಕ್ಕೆ ಸಿಗುವ ಹಣ್ಣುಗಳಲ್ಲಿ ಹೇರಳವಾಗಿವೆ. ಇವುಗಳನ್ನು ತಿಂದು, ಸರಿಯಾದ ಆಹಾರ ಕ್ರಮ, ಜೀವನ ಕ್ರಮಗಳನ್ನು ಅನುಸರಿಸಿ, ನಿಯಮಿತ ದೈಹಿಕ ಶ್ರಮ ಮಾಡಿದರೆ, ನಿರೋಗಿಗಳಾಗಿ ಹಾಗೂ ಶತಾಯುಷಿಗಳಾಗಿ ಬದುಕಬಹುದು.
500 ವರ್ಷಗಳ ಹಿಂದೆಯೇ ಸಿರಿಧಾನ್ಯಗಳು ಹೆಚ್ಚು ಪ್ರಚಲಿತದಲ್ಲಿ ಇರಲಿಲ್ಲ ಎಂದು ಸಾಕ್ಷ್ಯ ಸಿಕ್ಕ ಮೇಲೆ. ಈ 6 ವರ್ಷಗಳಿಂದ ಶುರುವಾಗಿರೋ ಗಾಳಿಸುದ್ದಿಗೆ ಕಿವಿ ಕೊಡುವುದು ಯಾಕೆ. ಅಸಲಿಗೆ ಇದೊಂದು ಕಾರ್ಪೋರೇಟ್ ಕಂಪನಿಗಳ ಷಡ್ಯಂತ್ರವಷ್ಟೇ,. ನಮ್ಮ ಅಕ್ಕಪಕ್ಕದ ದಿನಸಿ ಅಂಗಡಿಗಳಲ್ಲಿಯೇ ಈ ಸಿರಿಧಾನ್ಯಗಳು ಸಿಗೋದಿಲ್ಲ, ನಮಗೇನಾದರೂ ಸಿರಿಧಾನ್ಯ ಬೇಕಾದರೆ ದೊಡ್ಡ ದೊಡ್ಡ Super Market ಗಳಿಗೆ ಹೋಗಿ, ಬಣ್ಣ ಬಣ್ಣದ ಐಶಾರಾಮಿ cover ಗಳಲ್ಲಿ Packing ಮಾಡಿದ ಸಿರಿಧಾನ್ಯಗಳನ್ನು, ಅತಿಯೆನಿಸುವಷ್ಟು ಬೆಲೆ ತೆತ್ತು ತರಬೇಕು. ಬೆಲೆ ಹೆಚ್ಚು ಎಂದರೆ ಅವರ ಸಿದ್ಧ ಉತ್ತರ ಇವು Organic (ಸಾವಯವ) ಸಿರಿಧಾನ್ಯಗಳು.
ನೀವೇ ಯೋಚಿಸಿ ನೋಡಿ, ಸಿರಿಧಾನ್ಯ ಶ್ರೇಷ್ಟವೋ..? ರಾಮಧಾನ್ಯ ಶ್ರೇಷ್ಟವೋ…?
ನನ್ನ ವೈಯಕ್ತಿಕ ಅಭಿಪ್ರಾಯ ಸಿರಿಧಾನ್ಯಗಳನ್ನು ತಿನ್ನುವುದರಿಂದ ಮಾತ್ರವೇ ನಾವು ಆರೋಗ್ಯವಾಗಿರುತ್ತೇವೆ ಎಂಬುದೊಂದು ಅಪ್ಪಟ ಭ್ರಮೆಯಷ್ಟೇ!!!
ನಾನು ನನ್ನ ಅರಿವಿಗೆ ನಿಲುಕಿದ ವಿಚಾರಗಳನ್ನು ಹಂಚಿಕೊಂಡಿದ್ದೇನೆ, ಇನ್ನು ತಾವುಗಳೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಕೇಳಿಕೊಳ್ಲುತ್ತಾ, ಲೇಖನ ಇಲ್ಲಿಗೆ ಮುಗಿಸುತ್ತೇನೆ.
ಒಳ್ಳೇದಾಗ್ಲಿ.
ಧನ್ಯವಾದಗಳೊಂದಿಗೆ,
ಸರ್ವೇ ಜನಾಃ ಸುಖಿನೋ ಭವಂತು
ಲೋಕಾ ಸಮಸ್ತ ಸುಖಿನೋ ಭವಂತು
ಶ್ರೀ ಕೃಷ್ಣಾರ್ಪಣಮಸ್ತು

ಜೀವ ಮತ್ತು ಜೀವನಗಳ ವಿದ್ಯಾರ್ಥಿ


No comments:

Post a Comment

welcome to dgnsgreenworld Family

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ ?

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ? ​ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿಯನ್ನು ಸಂಪೂರ್ಣವಾಗಿ ...

Green World