🕉️ ಓಂ ಶ್ರೀ ಗುರುಭ್ಯೋ ನಮಃ 🕉️ *"ಶ್ರೀಕೃಷ್ಣ" ಎಂಬ ಆತ್ಮೀಯ ಬಂಧು*
🔮ಎಲ್ಲಿಯೂ ಈ ಬದುಕಿನ ಜಂಜಡಗಳಿಂದ ವಿಮುಖವಾಗುವ ಪಾಠ ಹೇಳುವುದಿಲ್ಲ.
🔮ಸಂಸಾರದಲ್ಲಿದ್ದುಕೊಂಡೆ ಮುಕ್ತಿಯ ಪಡೆಯುವ ದಾರಿ ತೋರಿಸಿದ ವ್ಯಕ್ತಿತ್ವ ಅದು.
🔮ಆತ ದೈವೀ ಸಂಭೂತನಾದರೂ ಮಹಾಭಾರತದುದ್ದಕ್ಕೂ ತನ್ನ ಯೋಚನೆಗಳ, ನಿರ್ಧಾರಗಳ ಚಾಣಾಕ್ಷತೆಯಿಂದಲೇ ಕಾರ್ಯ ಸಾಧಿಸುತ್ತಾನೆಯೇ ಹೊರತು ದೈವೀ ಶಕ್ತಿಯ ಪ್ರಯೋಗ ಮಾಡುವುದಿಲ್ಲ.
🔮ಜಗತ್ತಿನ ಒಳಿತಿಗಾಗಿ ಆತ ಕೈಗೊಳ್ಳುವ ಪ್ರತಿ ನಿರ್ಧಾರವೂ ಒಂದು ಜೀವನ ಪಾಠ.
🔮 ಆತ ಜಗವೆಂಬ ಪ್ರಜಾಪ್ರಭುತ್ವದ ಚಾಣಾಕ್ಷ ಹಾಗೂ ಅತ್ಯುನ್ನತ ಮೌಲ್ಯಗಳ ಬೋಧಿಸಿದ ರಾಜಕಾರಣಿ.
🔮ಕೃಷ್ಣನ ಅದೆಷ್ಟೋ ಕಥೆಗಳು ನಮ್ಮದೇ ಏನೋ ಅನಿಸುವಷ್ಟು ಹತ್ತಿರವಾಗುತ್ತವೆ. ನಮ್ಮ ಬದುಕಿನ ಹಲವು ಸಮಸ್ಯೆಗಳಿಗೆ ಆ ಕಥೆಗಳು ಅಥವಾ ಕಥೆಯಲ್ಲಿ ಬರುವ ಪಾತ್ರಗಳು ಉತ್ತರವಾಗಬಲ್ಲವು. ಸಂಬಂಧಗಳ ನಡುವಿನ ಗುದ್ದಾಟ, ವೈಷಮ್ಯ, ಹಾಗೂ ಅವನ್ನು ಕೃಷ್ಣ ನಿಭಾಯಿಸುವ ರೀತಿ ಎಲ್ಲವೂ ಅತ್ಯಪೂರ್ವ. ಅದಕ್ಕೇ ತಾನೆ ಮಹಾಭಾರತ ಮತ್ತೆ ಮತ್ತೆ ಮನಸನ್ನು ತಟ್ಟುವುದು. ಸಂಬಂಧಗಳೊಡನೆ ಹೋರಾಡಲಾರೆ ಎಂದು ಅರ್ಜುನ ಕುಳಿತಾಗ ಭಗವದ್ಗೀತೆ ಎಂಬ ಜೀವನ ಸತ್ಯವನ್ನು ಭೋದಿಸಿದ ಆ ಪಾರ್ಥಸಾರಥಿ *“ಇಲ್ಲಿ ಈಸಬೇಕು, ಇದ್ದು ಜಯಿಸಬೇಕು”* ಎಂಬ ಸಾರ್ವತ್ರಿಕ ಸತ್ಯದ ಅನಾವರಣ ಮಾಡುತ್ತಾನೆ.
🔮ಅದಕ್ಕೇ ನಮಗೆ ಶ್ರೀ ಕೃಷ್ಣ ಕಾಣುವುದು ಜೀವನ ಪ್ರೀತಿಯಾಗಿ. ಸಂದರ್ಭಗಳಿಗೆ ಹೆದರಿ ಹೇಡಿಯಂತೆ ಕರ್ತವ್ಯ ವಿಮುಖನಾಗುವುದು ಉಚಿತವಲ್ಲ.
🔮ನಾವು ಕೈಗೊಂಡಿರುವ ಕಾರ್ಯ ಒಳಿತಾಗಿದ್ದರೆ ಬೇರೆಲ್ಲವೂ ನಗಣ್ಯ ಎಂಬ ನಗ್ನ ಸತ್ಯದ ಅರಿವನ್ನು ಕೃಷ್ಣನ ವ್ಯಕ್ತಿತ್ವ ಪದೇ ಪದೇ ಮಾಡಿಸುತ್ತದೆ.
🔮ಈ ಬೆಣ್ಣೆ ಕೃಷ್ಣ ಎಲ್ಲರಿಗೂ ಅದೆಷ್ಟು ಆತ್ಮೀಯ ಅನ್ನುವುದಕ್ಕೆ ಅವನ ಕುರಿತಾಗಿ ರಚಿತವಾಗಿರುವ ಹಾಡುಗಳೇ ಸಾಕ್ಷಿ.
🔮ಅದೆಷ್ಟು ಹಾಡುಗಳು; ಅಬ್ಬಾ ಬಹುಷಃ ಎಣಿಕೆಗೆ ಸಿಗದ ಸಂಖ್ಯೆ ಅದು.
*“ಬೆಣ್ಣೆ ಕದ್ದ ನಮ್ಮ ಕೃಷ್ಣ..ಬೆಣ್ಣೆ ಕದ್ದನಮ್ಮ.. ಬೆಣ್ಣೆ ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮ..”*
🔮ದೇವರ ದೇವ ಆ ಕೃಷ್ಣ ಬೆಣ್ಣೆ ಕದ್ದನಂತೆ, ಜಾರಿ ಬಿದ್ದು ಮೊಣಕಾಲು ಬೇರೆ ಊದಿಸಿಕೊಂಡನಂತೆ. ಈ ಒಂದು ಸಾಲು ಸಾಕಲ್ಲವೇ ಕೃಷ್ಣ ಅದೆಷ್ಟು ಆತ್ಮೀಯ ಎಂದು ತಿಳಿಯಲು.
*“ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ…”*
🔮ದೇವರೇ ಇಡುವ ದೇವರಾಣೆ ಅದೆಷ್ಟು ಸೊಗಸು ಅಲ್ಲವೇ?
*“ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ?*
*ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ?”*
🔮ಉಡುಪಿಯ ಕೃಷ್ಣ, ಕೃಷ್ಣನದೇ ಉಡುಪಿ. ಅದೆಷ್ಟು ಸುಂದರ ಬಾಂಧವ್ಯ ಇದು ಅಲ್ಲವೇ?
🔮ಹೀಗೆ ಶ್ರೀಕೃಷ್ಣ ನಮಗೆ ಅವನ ರೂಪದಿಂದಲಾಗಲಿ, ಹೆಸರಿನಿಂದಾಗಲಿ, ಅಥವಾ ಈ ಹಾಡುಗಳಿಂದಾಗಲಿ, ಬೇರೆಲ್ಲೂ ಸಿಗದ, ಮನದೊಳಗೆ ಸಣ್ಣ ಕಚಗುಳಿ ಇಡುವ ನಗುವನ್ನು ತರುವ, ಅದೆಲ್ಲೋ ದೂರದಿಂದ ಅಗೋಚರವಾಗಿ ತನ್ನ ಮುರಳಿಯ ನಾದದಿಂದ ಆತ್ಮಾನಂದ ಕೊಡುವ ಮೋಜುಗಾರ. ಜಗತ್ತೇ ಅವನ ಲೀಲೆ, ಅದರೊಳಗೆ ಮಾನವ ರೂಪಿಯಾಗಿ ಬಂದು ಆತ ನಡೆಸಿದ ಲೀಲೆಗಳಿಗೆ ಮಿತಿ ಇಲ್ಲ.
🔮ಇನ್ನೊಂದು ದಾಸರ ಪದದ ಸಾಲು ನೆನಪಾಗುತ್ತಿದೆ.
*“ಮಣ್ಣುಂಡ ಬಾಯ ತೆರೆದು, ಬ್ರಹ್ಮಾಂಡವನೆ ತೋರಿದ ಕೃಷ್ಣ; ನಿನ್ನ ಲೀಲೆ ಪಾಡಲು ಮತಿಯು ಸಾಲದು…”*
🔮ನಿಜ. ಅವನ ಲೀಲೆಗಳ ಹಾಡಿ ಹೊಗಳುವಷ್ಟು ಮತಿ ನಮಗೆಲ್ಲಿಂದ ಬರಬೇಕು ಹೇಳಿ.
🔮ಇಲ್ಲಿ ನಾವು ವ್ಯಕ್ತ ಪಡಿಸಲು ಯತ್ನಿಸಿರುವುದು ಅವನ ಮೇಲಿನ ನಮ್ಮ ಪ್ರೀತಿ ಹಾಗೂ ನಮಗೇ ಅರಿಯದ ನಿಷ್ಕಾರಣ ಆಕರ್ಷಣೆ ಅಷ್ಟೇ.
🔮ಶ್ರೀ ಕೃಷ್ಣನ ವ್ಯಕ್ತಿತ್ವದಲ್ಲಿ ನಮ್ಮನ್ನು ಅತಿಯಾಗಿ ಆಕರ್ಷಿಸುವ ಗುಣವೆಂದರೆ, ಆತ ಸಾಮಾನ್ಯರೊಂದಿಗೆ ಸಾಮಾನ್ಯನಾಗಿದ್ದು ಕೂಡ ತನ್ನ ವ್ಯಕ್ತಿತ್ವದ ಘನತೆಯನ್ನು ಉಳಿಸಿಕೊಳ್ಳುವುದು.
🔮ಸಾರಥಿಯಾಗಿ ಅರ್ಜುನನಿಗೆ ಜೊತೆ ನೀಡುವ ಕೃಷ್ಣ,ಸಂದರ್ಭದ ಅಗತ್ಯತೆಯನ್ನರಿತು, ತನ್ನ ವಿಶ್ವರೂಪದರ್ಶನ ಮಾಡಿಸುತ್ತಾನೆ.
🔮ಹಾಗೆಯೇ ಯಾರೇ ಆಗಲಿ ತಮ್ಮಲ್ಲಿರುವ ಅದ್ಭುತ ಶಕ್ತಿಗಳನ್ನು ಪ್ರದರ್ಶನಕ್ಕಿಡದೇ ಅಗತ್ಯ ಬಿದ್ದಾಗ ಅದನ್ನು ಬಳಸಿ ಆ ಮೂಲಕ ತಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಅಭಿಪ್ರಾಯ.
No comments:
Post a Comment
welcome to dgnsgreenworld Family